೧೦೨ ದಿನಗಳಲ್ಲಿ ದಾಖಲೆ ಸೋಂಕು ಏರಿಕೆ

ನವದೆಹಲಿ, ಮಾ.೧೮- ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ದಾಖಲೆಯ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗಿರುವುದು ಆತಂಕಕ್ಕೆ ಸಿಲುಕಿಸುವ ಜೊತೆಗೆ ಜನರನ್ನು ಬೆಚ್ಚಿಬೀಳಿಸಿದೆ.

ಇಂದು ಬೆಳಗ್ಗೆ ೮ ಗಂಟೆಯ ತನಕ ೩೫,೮೭೧ ಮಂದಿಗೆ ದೇಶದಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು
೧೦೨ ದಿನಗಳ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ ೨೪ ಗಂಟೆಗಳಲ್ಲಿ ೧೭೨ ಮಂದಿ ಮೃತಪಟ್ಟಿದ್ದಾರೆ.೧೭,೮೪೧ ಮಂದಿ ಗುಣಮುಖರಾಗಿದ್ದಾರೆ.ದೇಶದಲ್ಲಿ ೧,೧೪,೭೪,೬೦೫ ಸೋಂಕು ಸಂಖ್ಯೆ ಗೆ ಏರಿಕೆಯಾಗಿದ್ದು ಇದುವರೆಗೆ ೧,೧೦,೬೩,೦೨೫ ಮಂದಿ ಚೇತರಿಸಿಕೊಂಡಿದ್ದಾರೆ , ಈ ವರೆಗೆ ೧,೫೯,೨೧೬ ಮಂದಿ ಮೃತಪಟ್ಟಿದ್ದಾರೆ

ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.

ಇದೇ ರೀತಿ ಸೋಂಕು ಹೆಚ್ಚಾಗುತ್ತಿದ್ದರೆ ದೇಶದಲ್ಲಿ ರಾತ್ರಿ ಕರ್ಫ್ಯೂ ಇಲ್ಲವೇ ಲಾಕ್ ಡೌನ್ ಜಾರಿಮಾಡುವ ಅನಿವಾರ್ಯತೆಯನ್ನು ಕೊರೊನಾ ಸೋಂಕು ಸೃಷ್ಠಿಸುತ್ತಿದೆ.

ಮಹಾರಾಷ್ಟ್ರ ಪಾಲು ಅಧಿಕ:

ದೇಶದಲ್ಲಿ ನಿನ್ನೆ ದೃಢಪಟ್ಟಿರುವ ಒಟ್ಟಾರೆ ಸೋಂಕಿನ ಪೈಕಿ ಮಹಾರಾಷ್ಟ್ರ ಒಂದರಲ್ಲಿ ಶೇಕಡಾ ೬೪ ರಷ್ಟು ಪಾಲು ಹೊಂದಿದೆ ಅಂದರೆ ಸರಿಸುಮಾರು ೨೩,೧೭೯ ಮಂದಿಗೆ ಸೋಂಕು ತಗಲಿದೆ ಮಹಾರಾಷ್ಟ್ರದಲ್ಲಿ ಎರಡನೆಯ ಅಲೆ ಕಾಣಿಸಿಕೊಂಡಿರುವ ಭೀತಿ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಸೆಪ್ಟೆಂಬರ್ ೧೭ರಂದು ೨೪,೬೧೯ ಸೋಂಕು ಕಾಣಿಸಿಕೊಂಡಿತ್ತು ಅದಾದ ಆರು ತಿಂಗಳ ಬಳಿಕ ನಿನ್ನೆ ದಾಖಲೆ ಪ್ರಮಾಣದಲ್ಲಿ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ನಾಲ್ಕು ಪಟ್ಟು ಕಳೆದ ೧೫ ದಿನಗಳಲ್ಲಿ ದಾಖಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರ ಕೇರಳ,ಕರ್ನಾಟಕ-ಪಂಜಾಬ್, ಗುಜರಾತ್ ತಮಿಳುನಾಡು ಛತ್ತೀಸ್ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತಿರುವುದದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಮಾಡಿದೆ

ಮಹಾರಾಷ್ಟ್ರದಲ್ಲಿ ದಿನನಿತ್ಯ ಸೋಂಕು ಪ್ರಮಾಣ ಹೆಚ್ಚಾಗುತ್ತದೆ ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ ಹೀಗಿದ್ದರೂ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ ೨೩,೧೭೯, ಕೇರಳದಲ್ಲಿ ೨೦೯೮, ಪಂಜಾಬ್ ನಲ್ಲಿ ೨೦೩೯, ಗುಜರಾತ್ ,೧೧೨೨, ಕರ್ನಾಟಕ ೧೨೭೫ ಸೋಂಕು ಪ್ರಕರಣ ಕಂಡು ಬಂದಿದೆ.

ಅತಿ ಹೆಚ್ಚು ಸೋಂಕು ದಾಖಲಾಗಿರುವ ಮಹಾರಾಷ್ಟ್ರದ ನಾಗ್ಪುದದಲ್ಲಿ ಒಂದೇ ದಿನ ೨೬೯೮ ಮತ್ತು ಮುಂಬೈನಲ್ಲಿ ೨೩೭೭ ಮಂದಿಗೆ ಸೋಂಕು ಕಾಣಿಸಿಕೊಂಡಿದೆ

ಹೆಚ್ಚು ಪರೀಕ್ಷೆಗೆ ಸೂಚನೆ

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಪ್ರತಿನಿತ್ಯ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳು ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

ಸೋಂಕು ಪತ್ತೆ ಪರೀಕ್ಷೆ ಮತ್ತು ಚಿಕಿತ್ಸೆ ಹೆಚ್ಚಿನ ಪ್ರಮಾಣದಲ್ಲಿ ನೀಡುವುದರಿಂದ ಮತ್ತಷ್ಟು ಹರಡದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ

ದುಪ್ಪಟ್ಟು ಸಕ್ರಿಯ ಪ್ರಕರಣ ಏರಿಕೆ

ದೇಶದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.ಸದ್ಯ ದೇಶದಲ್ಲಿ ೨,೫೨,೩೬೪ ಸಕ್ರಿಯ ಪ್ರಕರಣಗಳಿವೆ.

ಸಕ್ರಿಯ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

೩.೭೧ ಕೋಟಿಗೆ ಲಸಿಕೆ:

ದೇಶದಲ್ಲಿ ಈವರೆಘೆ ೩,೭೧,೪೩,೨೫೫ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಒಂದೆಡೆ ಕೊರೋನಾ ಸೋಂಕು ಹೆಚ್ಚುತ್ತಿದ್ದು ಮತ್ತೊಂದು ಕಡೆ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿಸಲಾಗಿದೆ