೧೦೦ ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಹಾಲಕ್ಷ್ಮಿ ಲೇಔಟ್ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಸಚಿವರಾದ ಕೆ. ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜು ಮತ್ತಿತರರಿದ್ದಾರೆ.

ಬೆಂಗಳೂರು,ಜು.೧೭- ನಗರದ ಮಹಾಲಕ್ಷ್ಮಿ ಲೇಔಟ್ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು ೧೦೦ ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ವ್ಯಾಪ್ತಿಯ ಡಾ. ರಾಜ್‌ಕುಮಾರ್ ರಸ್ತೆಯ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತದಲ್ಲಿ ೪೮೦ ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಬಸವಧಾಮ ಉದ್ಯಾನವನ ಉದ್ಘಾಟಿಸಿದರು. ನಂತರ ಮಾರಪ್ಪನಪಾಳ್ಯ ವಾರ್ಡ್‌ನಲ್ಲಿ ೭೦೦ ಲಕ್ಷ ರೂ. ವೆಚ್ಚದಲ್ಲಿ ಡಾ. ಬಿಆರ್ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿದರು. ನಂತರ ಬಿಇಎಂಎಲ್ ಬಡಾವಣೆಯಲ್ಲಿ ೩೯೨ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಪರಮ ಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಉದ್ಯಾನವನ ಉದ್ಘಾಟಿಸಿದರು. ನಂತರ ಭೋವಿಪಾಳ್ಯದಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕುಪತ್ರ ವಿತರಣೆ, ನಂತರ ಮಹಾಲಕ್ಷ್ಮಿ ಲೇಔಟ್‌ನ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊರವರ್ತುಲ ರಸ್ತೆಯಿಂದ ಪಶ್ಚಿಮಕಾರ್ಡ್‌ರಸ್ತೆಗೆ ೫೫೦೦ ಲಕ್ಷ ರೂ ವೆಚ್ಚದಲ್ಲಿ (ಕುರುಬರ ಹಳ್ಳಿ ಪೈಪ್‌ಲೈನ್ ರಸ್ತೆ ಮಾರ್ಗವಾಗಿ) ನಿರ್ಮಿಸಲು ಉದ್ದೇಶಿಸಿರುವ ಮೇಲುಸೇತುವೆ ಕಾಮಗಾರಿಯ ಶಂಕುಸ್ಥಾಪನೆ, ನಂತರ ಪೀಣ್ಯ ಗ್ರಾಮದ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಹತ್ತಿರ ೭೫೦.೦೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ, ನಂತರ ಪೀಣ್ಯ ಗ್ರಾಮದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ೫೫೦.೦೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಮಾದರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನೂತನ ಕಟ್ಟಡ ಉದ್ಘಾಟನೆ ನಂತರ ಪೀಣ್ಯ ಗ್ರಾಮದ ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ೨೦೦೦.೦೦ ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ನೂತನ ಕಟ್ಟಡ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಿದ್ದಗಂಗಾಶ್ರೀಗಳಾದ ಸಿದ್ದಲಿಂಗಸ್ವಾಮಿಗಳು, ಆದಿಚುಂಚನಗಿರಿ ಶ್ರೀಗಳಾದ ಸೌಮ್ಯನಾಥಸ್ವಾಮೀಜಿ, ಸಚಿವರುಗಳಾದ ಕೆ. ಗೋಪಾಲಯ್ಯ, ಮುನಿರತ್ನ, ಭೈರತಿ ಬಸವರಾಜು, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್, ಮಖ್ಯ ಆಯುಕ್ತ ತುಷಾರ್‌ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.