ಬೆಂಗಳೂರು, ಜೂ. ೨೬- ಕೇಂದ್ರ ಸರ್ಕಾರ ಅಕ್ಕಿ ಪೂರೈಸುವ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಉಪಮುಖ್ಯಮಂತ್ರಿ ಡಿ.ಕೆ, ಶಿವಕುಮಾರ್ ಅನ್ನಭಾಗ್ಯ ಯೋಜನೆಯಡಿ ಘೋಷಿಸಿರುವ ೧೦ ಕೆ.ಜಿ. ಅಕ್ಕಿಯನ್ನು ಕೊಟ್ಟೇ ಕೊಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಮಾತು ಕೊಟ್ಟಿದ್ದೇವೆ. ಅದನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಗೆ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅನ್ನಭಾಗ್ಯ ಯೋಜನೆಯಡಿ ಒಂದು ಕಾಳು ಕಡಿಮೆಯಾದರೂ ಧರಣಿ ಮಾಡುವುದಾಗಿ ಹೇಳಿದೆ. ೩೬೫ ದಿನವೂ ಧರಣಿ ಮಾಡಲಿ, ನಮಗೆ ಬೇಜಾರಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಿಜೆಪಿ ಹೋರಾಟ ಮಾಡಲಿ. ನಾವು ಜನರ ಸೇವೆ ಮುಂದುವರಿಸುತ್ತೇವೆ ಎಂದು ತಿರುಗೇಟು ನೀಡಿದರು.
ಅಕ್ಕಿ ವಿತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಇದಕ್ಕೆ ಬದಲಾಗಿ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದಿದ್ದು ಮೋದಿ ಎಂದು ಬಿಜೆಪಿ ಹೇಳುತ್ತಿದೆ. ಆಹಾರ ಭದ್ರತಾ ಕಾಯ್ದೆಯಡಿ ೫ ಕೆ.ಜಿ. ಅಕ್ಕಿ ವಿತರಣೆಯನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಡಾ. ಮನ್‌ಮೋಹನ್‌ಸಿಂಗ್ ಜಾರಿಗೆ ತಂದಿದ್ದರೂ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಈ ಹಿಂದೆ ಅಧಿಕಾರಕ್ಕೆ ಬಂದಾಗ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅನ್ನಭಾಗ್ಯ ಘೋಷಣೆ ಮಾಡಿದ್ದರು ಎಂದು ಅವರು ಹೇಳಿದರು.
೫ ಕೆ.ಜಿ. ಅಕ್ಕಿಯ ಜೊತೆ ರಾಗಿ, ಗೋಧಿ, ಜೋಳ ನೀಡುವಂತೆ ಜನರಿಂದ ಬೇಡಿಕೆ ಬಂದಿದೆ. ಕೇಂದ್ರ ಸರ್ಕಾರ ಅಕ್ಕಿ ಪೂರೈಸದಿದ್ದರೂ ಬೇರೆ ಮೂಲಗಳಿಂದ ಅಕ್ಕಿ ಖರೀದಿಸಿ ಕೊಟ್ಟ ಮಾತಿನಂತೆ ಅನ್ನಭಾಗ್ಯ ಯೋಜನೆಯಡಿ ೧೦ ಕೆ.ಜಿ. ಅಕ್ಕಿಯನ್ನು ಕೊಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.
ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಭೇಟಿ ಕೈಗೊಂಡ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಕ್ಕಿ ಪೂರೈಸುವಂತೆ ಮನವಿ ಮಾಡಿದರು.
ಇದೇ ವೇಳೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ದೆಹಲಿಗೆ ಭೇಟಿ ನೀಡಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಗೋಯಲ್ ಅವರು ರಾಜ್ಯ ಸರ್ಕಾರದ ಬೇಡಿಕೆಯನ್ನು ತಿರಸ್ಕರಿಸಿದ್ದರು. ಹೀಗಾಗಿ ಅನ್ನಭಾಗ್ಯ ಯೋಜನೆ ಅನುಷ್ಠಾನ ವಿಳಂಬವಾಗಲಿದೆ.