
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಆ.09: ತಾಲೂಕಿನ ಕಂದಗಲ್ಲು ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ 2023-24 ನೇ ಸಾಲಿನ ಹ್ಯಾಳ್ಯಾ ವಲಯ ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.
ಈ ಕ್ರೀಡಾಕೂಟವನ್ನು ಕಂದಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಯಿತು. ಕಂದಗಲ್ಲು ಗ್ರಾಮದ ಯುವಕರು ಗ್ರಾಮದಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯವರೆಗೆ ಜ್ಯೋತಿಯನ್ನು ತಂದ ನಂತರ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಯಿತು.
ಇದರಲ್ಲಿ 12 ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಖೋ ಖೋ, ಕಬ್ಬಡ್ಡಿ, ವಾಲಿಬಾಲ್, ಥ್ರೋ ಬಾಲ್, ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಕೆ. ಮೂಗಪ್ಪ ತಿಳಿಸಿದರು.
ಬಾಲಕಿಯರ ವಿಭಾಗದ ಖೋ ಖೋ ಪಂದ್ಯದಲ್ಲಿ ಬೇವೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕರ ವಿಭಾಗದ ಮಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ಗೆಲುವನ್ನು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದವು.
ಬಾಲಕರ ವಿಭಾಗದ ಖೋ ಖೋ ಪೈನಲ್ ಪಂದ್ಯದಲ್ಲಿ ಮಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮತ್ತು ಹ್ಯಾಳ್ಯಾ ಗ್ರಾಮದ ಸರ್ಕಾರಿ ಶಾಲೆ ಮುಖ ಮುಖಿಯಾಗಿದ್ದವು, ಈ ಪಂದ್ಯದಲ್ಲಿ ಮಲ್ಲನಾಯಕನಹಳ್ಳಿ ಶಾಲೆ ಪ್ರಥಮ ಸ್ಥಾನ ಪಡೆದು ಗೆಲುವನ್ನು ಸಾಧಿಸಿತು. ಈ ಹಿಂದೆ ಖೋ ಖೋ ಪಂದ್ಯದ ವಲಯ ಮಟ್ಟದಲ್ಲಿ ಹ್ಯಾಳ್ಯಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸೋಲಿಲ್ಲದ ಸರದಾರದಂತೆ ತನ್ನ ಭದ್ರ ಬುನಾದಿಯನ್ನು ಹಾಕಿಕೊಂಡಿದ್ದ ಶಾಲೆ ಈಗ ದ್ವಿತೀಯ ಸ್ಥಾನ ಪಡೆದು ತೃಪ್ತಿ ಪಡೆದುಕೊಂಡಿದ್ದರಿಂದ ಗ್ರಾಮದ ನೋಡುಗರಿಗೆ ನಿರಾಸೆ ಉಂಟು ಮಾಡಿತು.
ಬಾಲಕರ ವಿಭಾಗದ ಕಬ್ಬಡ್ಡಿ ಪಂದ್ಯಗಳಲ್ಲಿ ಕಂದಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಲಕಿಯರ ವಿಭಾಗದ ಕೆ.ಬಿ.ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆದು ಗೆಲುವನ್ನು ಸಾಧಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದವು.
ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಸನಗೌಡ್ರು ಮತ್ತು ಸದಸ್ಯರು, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಾಜಣ್ಣ ಹಾಗೂ ಸದಸ್ಯರು, ಮುಖ್ಯೋಪಾಧ್ಯಯರಾದ ಕೆ. ಮೂಗಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಾರುತೇಶ್, ಸಿಆರ್ಪಿ ಸಂದೀಪ್, , ಸೇರಿದಂತೆ ಗ್ರಾಮದ ಯುವಕರು ಹಾಗೂ ಇತರರು ಉಪಸ್ಥಿತರಿದ್ದರು.