ಕೊಟ್ರೇಶ್ ಉತ್ತಂಗಿ
ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.20: ತಾಲೂಕಿನಾದ್ಯಂತ ಜೂನ್ ತಿಂಗಳು ಕಳೆದರೂ ಸಮರ್ಪಕವಾಗಿ ಮಳೆ ಆಗದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ಕೆಲ ರೈತರು ಆಕಾಶವನ್ನು ದಿಟ್ಟಿಸಿ ನೋಡುವಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ, ಇನ್ನು ಕೆಲ ರೈತ ಮಹಿಳೆಯರು ಮಳೆಗಾಗಿ ದೈವದ ಮೊರೆ ಹೋಗಿ ವಿಶಿಷ್ಟ ಆಚರಣೆಗಳನ್ನು ಕೈಗೊಂಡಿದ್ದಾರೆ.
ಹೌದು ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಮಹಿಳೆಯರು ಕೆರೆ ಹೊನ್ನಮ್ಮ ದೇವತೆಯ ಹೆಸರಿನಲ್ಲಿ ಪೂಜೆಯನ್ನು ಸಲ್ಲಿಸಿ ಪದ ಕಟ್ಟಿ ಆಡಿದರೆ ಮಳೆರಾಯ ತನ್ನ ಸಿಟ್ಟನ್ನು ಬದಿಗಿಟ್ಟು ಧರೆಗಿಳಿಯುತ್ತಾನೆ ಎಂಬ ನಂಬಿಕೆಯಿಂದ ವಿಶಿಷ್ಟ ಆಚರಣೆಯನ್ನು ಕೈಗೊಂಡಿದ್ದಾರೆ
ಕೆರೆ ಹೊನ್ನಮ್ಮನ ಹಿನ್ನೆಲೆ:
ಅನೇಕ ಶತಮಾನದ ಹಿಂದೆ ಅಣಜಿ ಎಂಬ ಊರಿನಲ್ಲಿ ಕೆಂಚನಗೌಡ ಎಂಬ ಗೌಡನಿದ್ದ, ಅವನಿಗೊಬ್ಬ ಮಗನಿದ್ದ ಅವನ ಹೆಸರು ಮಲ್ಲನಗೌಡ, ಈ ಮಲ್ಲನಗೌಡ ಕೆಸರನಹಳ್ಳಿ ಗ್ರಾಮದ ಮಹಿಳೆಯನ್ನು ಮದುವೆಯಾಗುತ್ತಾನೆ ಅವಳೇ ಹೊನ್ನಮ್ಮ. ಆ ಗ್ರಾಮಕ್ಕೆ ಬರಗಾಲ ಬಂದೊದಗಿ ಅಲ್ಲಿನ ಜನರಿಗೆ ಮತ್ತು ದನಕರುಗಳಿಗೆ ಕುಡಿಯಲು ಒಂದು ಹನಿಯು ನೀರು ಸಿಗುತ್ತಿರಲಿಲ್ಲ, ಅಲ್ಲಿನ ಜನರು ಊರಿನ ಗೌಡದವನು ಜನರಿಗೆ ನೀರಿನ ದಹ ತೀರಿಸಬೇಕು ತೆಗಳುತ್ತಿರುತ್ತಾರೆ. ಹಾಗಾಗಿ ಗೌಡ ಅಣಜಿಯಲ್ಲಿ ಏಳು ಊರಿನ ವಡ್ಡರಿಂದ(ಕಾರ್ಮಿಕ) ಕೆರೆಯನ್ನು ನಿರ್ಮಾಣ ಮಾಡುತ್ತಾನೆ, ಕೆರೆ ನಿರ್ಮಾಣ ಏಳು ವರ್ಷವಾದರೂ ಒಂದು ಹನಿಯು ಸಹ ಮಳೆ ಸುರಿದಿರಲಿಲ್ಲ, ಇದನ್ನು ಕಂಡ ಕೆಂಚನಗೌಡ ಜ್ಯೋತಿಷ್ಯರ ಬಳಿ ಪ್ರಶ್ನೆ ಕೇಳಲು ಹೋಗುತ್ತಾನೆ ಆ ಜ್ಯೋತಿಷ್ಯ ನಿಮ್ಮ ಮನೆಯಲ್ಲಿ ಯಾರಾದರೂ ಒಬ್ಬರು ಕೆರೆಗೆ “ಹಾರ” ಬೇಕು ಎಂದು ಜೋತಿಷ್ಯ ನುಡಿಯುತ್ತಾನೆ, ಅದರಂತೆ ತನ್ನ ಮನೆಯಲ್ಲಿ ಕೆರೆಯ ಬಲಿ ಸೂಕ್ತವಾಗಿದ್ದು ನನ್ನ ಸೊಸೆ ಎಂದು ಭಾವಿಸಿ, ಗೌಡ ಯಾರ ಹತ್ತಿರವೂ ಹೇಳದೆ ಸೊಸೆಯ ಹತ್ತಿರ ಹೋಗಿ ಕೆರೆಗೆ “ಹಾರ”ಬೇಕು ಎಂದು ತಿಳಿಸುತ್ತಾನೆ, ವಲ್ಲದ ಮನಸ್ಸಿನಲ್ಲಿ ಒಪ್ಪಿಗೆ ನೀಡುತ್ತಾಳೆ. ಸೊಸೆಯು ಕೆರೆ ಹೋಗುತ್ತಾಳೆ, ಕೆರೆಯಿಂದ ಹೊರಬರುವ ಹೊತ್ತಿಗೆ ಸಿಡಿಲು ಗುಡುಗು ಮಿಂಚು ಸಹಿತ ಭರ್ಜರಿ ಮಳೆ ಸುರಿದು ಕೆರೆ ತುಂಬಿ ಹರಿಯುತ್ತದೆ. ಅಂದೇ ಆ ಮಹಿಳೆ “ಹಾರ”ವಾಗಿ ಬಿಡುತ್ತಾಳೆ. ಅಂದಿನಿಂದ ಇಂದಿನವರೆಗೆ ಅಣಜಿಯಲ್ಲಿರುವ ಕೆರೆಗೆ ಹೊನ್ನಮ್ಮನ ಕೆರೆ ಎಂದು ಹೆಸರು ಇದೆ. ಈಗಲೂ ಸಹ ಅಣಜಿಯಲ್ಲಿ ಈ ಕೆರೆಯನ್ನು ಕಾಣಬಹುದು ಅಂದಿನಿಂದ ಇಂದಿನವರೆಗೂ ಕೆಸರನಹಳ್ಳಿ ಹೆಣ್ಣು ಬೇಡ, ಅಣಜಿ ಗಂಡು ಬೇಡ ಎಂಬ ಗಾದೆ ಪ್ರಸ್ತುತದಲ್ಲಿದೆ.
ವಿಶಿಷ್ಟ ಆಚರಣೆ:
ಒಂದು ಕುರ್ಚಿಯ ಮೇಲೆ ಕುಂಭವನಿಟ್ಟು ಅದರ ಸುತ್ತಲೂ ಸೀರೆಯನ್ನು ತೊಡಿಸಿ ಕುಂಬದ ಮೇಲೆ ತೆಂಗಿನಕಾಯಿ ಅಳವಡಿಸಿ ಉಡಿ ತುಂಬಿ ಕೆರೆ ಹೊನ್ನಮ್ಮ ದೇವತೆ ಎಂದು ಹೆಸರಿಟ್ಟು, ಅದೇ ರೀತಿ ಇನ್ನೊಂದು ಕುರ್ಚಿಯ ಮೇಲೆ ಅವಳ ಗಂಡನಾದ ಮಲ್ಲಯ್ಯನ ರೂಪದಲ್ಲಿ ಕುಂಭವನ್ನಿಟ್ಟು ತೆಂಗಿನಕಾಯಿಯನ್ನು ಅಳವಡಿಸಿ ಪಂಚೆಯನ್ನು ತೊಡಿಸಿ ಮಲ್ಲಯ್ಯನ ಸ್ಥಾನದ ರೂಪದಲ್ಲಿ ಯುವಕನೊಬ್ಬ ತಂಗಿ ಹೊನ್ನಮ್ಮನ ರೂಪದಲ್ಲಿರುವ ಕುಂಭಕ್ಕೆ ತಾಳಿಯನ್ನು ಕಟ್ಟಿದರೆ ಮಳೆಯೂ ಧರೆಗಿಳಿಯುತ್ತದೆ ಎಂಬುದು ಇಲ್ಲಿನ ಮಹಿಳೆಯರ ನಂಬಿಕೆಯಾಗಿದೆ.
ಮೂರು ದಿನಗಳ ನಂತರ ಹೊನ್ನಮ್ಮನಿಗೆ ತುಂಬಿದ ಉಡಿ ಅಕ್ಕಿಯನ್ನು ಅಣಜಿ ಕೆರೆಯಲ್ಲಿ ಬಾಗಿನ ಅರ್ಪಣೆ ಮಾಡಿ ಬರುತ್ತಾರೆ.
ಸುಮಾರು ವರ್ಷಗಳಿಂದ ಈ ಸಂಪ್ರದಾಯವನ್ನು ಮಾಡಿಕೊಂಡು ಬರುತ್ತಿದ್ದೇವೆ. ಮಳೆಯು ಧರೆಗೆ ಇಳಿಯದೇ ಇದ್ದಾಗ ಮೂರು ದಿನಗಳ ಕಾಲ ಸಂಜೆಯ ಸಮಯದಲ್ಲಿ ಈ ಸಂಪ್ರದಾಯವನ್ನು ಮಾಡಿಕೊಂಡು ಬರುತ್ತಿದ್ದೇವೆ. ಈ ಸಂಪ್ರದಾಯದಿಂದಾಗಿ ಅನೇಕ ಬಾರಿ ಮಳೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳುತ್ತಾಳೆ ಇಲ್ಲಿನ ಮಹಿಳೆ ಸಣ್ಣ ತಂಗೆಮ್ಮ.
ಮೂರು ದಿನಗಳಿಂದ ಕೆರೆ ಹೊನ್ನಮ್ಮ ದೇವತೆಯ ಪೂಜೆಯನ್ನು ಸಲ್ಲಿಸಿ ಹೊನ್ನಮ್ಮನ ಪದಗಳನ್ನು ಆಡುತ್ತಿರುವುದರಿಂದ ಸ್ವಲ್ಪ ಮೋಡ ಕವಿದ ವಾತಾವರಣ ಉಂಟಾಗಿದೆ ಎಂದು ಹೇಳುತ್ತಾಳೆ ಇಲ್ಲಿನ ಮಹಿಳೆ ಗದುಗಿನ ಗೌರಮ್ಮ.