
ಕೊಟ್ರೇಶ್ ಉತ್ತಂಗಿ
ಕೊಟ್ಟೂರು, ಸೆ.14: ತಾಲ್ಲೂಕಿನ ಹ್ಯಾಳ್ಯಾದಲ್ಲಿ ೧೨ನೇ ಶತಮಾನದ ತುರುಕಾಳಗ ವೀರಗಲ್ಲನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಡಿ.ವೀರೇಶ ಅವರು ನೂತನವಾಗಿ ಶೋಧನೆ ಮಾಡಿದ್ದು ಗಮನಾರ್ಹ ವಿಷಯವಾಗಿದೆ.
ಇತಿಹಾಸವನ್ನು ಸಾರುವಂತಹ ಚಾಲುಕ್ಯರ ಕಾಲದ ವೀರಗಲ್ಲು ಹ್ಯಾಳ್ಯಾ ಗ್ರಾಮದ ಹಳೆ ಊರಿನ ನಾಗಪ್ಪ ಕಟ್ಟೆಯ ಮುಂಭಾಗದಲ್ಲಿ ದೊರೆತಿದ್ದು ವಿಶೇಷ.
ವೀರಗಲ್ಲು ವಿಶೇಷತೆ:
ನೀಲಿಮಿಶ್ರಿತ ಬಳಪದ ಶಿಲೆಯ ವೀರಗಲ್ಲು ೩ ಅಡಿ ಎತ್ತರ ಹಾಗೂ ೧.೫ ಅಡಿ ಅಗಲದ ವಿನ್ಯಾಸವನ್ನು ಹೊಂದಿದ್ದು, ಮೂರು ಹಂತಗಳಲ್ಲಿ ಕಾಣಬಹುದಾಗಿದೆ. ಕೆಳಗಿನ ಹಂತದಲ್ಲಿ ಧನುರ್ಧಾರಿ ವೀರನೊಬ್ಬ ಹಸುಗಳ ರಕ್ಷಣೆಗಾಗಿ ಶತ್ರು ಯೋಧರೊಂದಿಗೆ ಹೋರಾಡುತ್ತಿರುವ ಚಿತ್ರಣವಿದೆ. ಉಳಿದ ಅರ್ಧಭಾಗ ನೆಲದಲ್ಲಿ ಹೂತಿದೆ. ಮಧ್ಯದ ಹಂತದಲ್ಲಿ ತುರುಕಾಳಗದಲ್ಲಿ ವೀರಮರಣ ಹೊಂದಿದ ಧನುರ್ಧಾರಿ ಯೋಧನನ್ನು ಸುರಂಗನಾರೆಯರು ಹೆಗಲ ಮೇಲೆ ಕೈಹಾಕಿ ಆಕಾಶದಲ್ಲಿ ಹಾರುತ್ತಿರುವುದು, ಕೊನೆಯ ಹಂತದಲ್ಲಿ ಸ್ವರ್ಗಲೋಕದಲ್ಲಿ ವೀರ, ಶಿವಲಿಂಗ, ನಂದಿ, ಸೂರ್ಯ-ಚಂದ್ರರ ಸಂಕೇತಗಳಿದ್ದು, ಶಿಲ್ಪವು ತೃಟಿತವಾದ ಬಗ್ಗೆ ತಿಳಿಸುತ್ತದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಇದು ೧೨ನೇ ಶತಮಾನದ ಕಲ್ಯಾಣ ಚಾಲುಕ್ಯರ ಅವಧಿಯಲ್ಲಿ ತುರುಕಾಳಗದಲ್ಲಿ ಮಡಿದ ಹ್ಯಾಳ್ಯಾ ಗ್ರಾಮದ ವೀರನೊಬ್ಬನ ವೀರಮರಣದ ಸ್ಮಾರಕವೆಂದು ತಿಳಿಸಿ, ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.
ಯಾವ ಕಾರಣದಿಂದಲಾದರೂ ಶತ್ರುಗಳು ದನಗಳನ್ನು ಅಪಹರಿಸಿದಾಗ ಆ ದನಗಳನ್ನು ರಕ್ಷಿಸಿಕೊಳ್ಳಲು ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿದ್ದರು. ಆ ಹೋರಾಟದಲ್ಲಿ ಕೆಲವರು ಗೆದ್ದು ಹಿಂತಿರುಗಿ ಬಂದರೆ ಮತ್ತೆ ಕೆಲವರು ಸಾವನ್ನಪ್ಪುತ್ತಿದ್ದರು. ಇಂತಹ ವೀರರ ನೆನಪಿಗಾಗಿ ಈ ತುರುಗೊಳ್ ಸ್ಮಾರಕಗಳನ್ನು ಹಾಕಿಸುತ್ತಿದ್ದರು. ಕೊನೆಗೆ ಗ್ರಾಮದ ಜನರ ಸಹಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.
ಡಾ. ಡಿ.ವಿ. ಪರಮಶಿವಮೂರ್ತಿ
ಕುಲಪತಿಗಳು
ಕನ್ನಡ ವಿಶ್ವವಿದ್ಯಾಲಯ, ಹಂಪಿ
ಕರ್ನಾಟಕ ಸಾಂಸ್ಕೃತಿಕ ಇತಿಹಾಸ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಸ್ಮಾರಕ ಶಿಲ್ಪಗಳಿಗಿಂತ ಪ್ರಮುಖ ಸಾಧನ ಮತ್ತೊಂದಿಲ್ಲ. ಇವು ನಮ್ಮ ಹಿರಿಯರ ಜೀವನಶೈಲಿಗೆ ಸಾಕ್ಷಿಯಾಗಿ ನಿಂತಿವೆ.
ಡಾ. ಅಮರೇಶ ಯತಗಲ್
ಮುಖ್ಯಸ್ಥರು
ಶಾಸನಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ