
ಮುಂಬೈ, ಮಾ.೬- ಆಸ್ಟ್ರೇಲಿಯಾದ ಆಲ್‌ರೌಂಡರ್ ಅಟಗಾರ್ತಿ ಗ್ರೇಸ್ ಹ್ಯಾರಿಸ್ ಪ್ರದರ್ಶಿಸಿದ ಸಿಡಿಲಬ್ಬರದ ಬ್ಯಾಟಿಂಗ್ ಪ್ರರ್ಶನದ ನೆರವಿನಿಂದ ಇಲ್ಲಿ ಡಬ್ಲ್ಯುಪಿಎಲ್‌ನ ಗುಜರಾತ್ ಜಾಯಂಟ್ಸ್ ವಿರುದ್ದದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಮೂರು ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಅತ್ತ ಗುಜರಾತ್ ಪರ ಕಿಮ್ ಗಾರ್ತ್ ಐದು ವಿಕೆಟ್‌ಗಳ ಗೊಂಚಲು ಪಡೆದರೂ ತಂಡ ಗೆಲುವು ಸಾಧಿಸಲು ವಿಫಲತೆ ಕಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್‌ಗೆ ಅರಂಭಿಕ ಆಟಗಾರ್ತಿ ಸಬ್ಭಿನೇನಿ ಮೇಘನಾ (೨೪) ಉತ್ತಮ ಆರಂಭವನ್ನೇ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಹರ್ಲೀನ್ ದಿಯೋಲ್ ವೇಗದ ೪೬ ರನ್‌ಗಳ ಇನ್ನಿಂಗ್ಸ್ ಪ್ರದರ್ಶಿಸಿದರು. ಅಲ್ಲದೆ ಅಂತಿಮ ಹಂತದಲ್ಲಿ ಗಾರ್ಡ್ನರ್ (೨೫) ಹಾಗೂ ಹೇಮಲತಾ (೨೧) ವೇಗದ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ತಂಡ ನಿಗದಿತ ೨೦ ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ ೧೬೯ ರನ್‌ಗಳ ಗುರಿ ನಿಗದಿಪಡಿಸಿತು. ಯುಪಿ ಪರ ದೀಪ್ತಿ ಶರ್ಮಾ ಹಾಗೂ ಎಕ್ಲೆಸ್ಟನ್ ತಲಾ ಎರಡು ವಿಕೆಟ್ ಪಡೆದರು.
ಇನ್ನು ಗುರಿ ಬೆನ್ನತ್ತಿದ ಯುಪಿ ಪರ ಅಲಿಸ್ಸಾ ಹೀಲಿ (೭) ಹಾಗೂ ಶ್ವೇತಾ ಸೆಹ್ರಾವತ್ (೫) ವಿಫಲತೆ ಕಂಡರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ತಾಹಿಲಾ ಮೆಕ್‌ಗ್ರಾತ್ (೦) ಹಾಗೂ ದೀಪ್ತಿ ಶರ್ಮಾ (೧೧) ವೈಫಲ್ಯ ತಂಡಕ್ಕೆ ದುಬಾರಿಯಾಗುವ ಲಕ್ಷಣ ಗೋಚರಿಸಿತು. ಆದರೆ ಕಿರನ್ ನವ್ಗಿರೆ ೫೩ ರನ್‌ಗಳ ಆಟ ಪ್ರದರ್ಶಿಸಿ ತಂಡಕ್ಕೆ ಅಸರೆಯಾದರು. ಆದರೂ ಒಂದು ಹಂತದಲ್ಲಿ ತಂಡ ೧೫.೪ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೦೫ ರನ್ ಗಳಿಸಿ, ಬಹುತೇಕ ಸೋಲಿನತ್ತ ಮುಖ ಮಾಡಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿಕೊಂಡ ಹ್ಯಾರಿಸ್ ಹಾಗೂ ಸೋಫಿ ಎಕ್ಲೆಸ್ಟನ್ ಜೋಡಿ ಕೇವಲ ೪.೧ ಓವರ್‌ಗಳಲ್ಲಿ ಬರೊಬ್ಬರಿ ಅಜೇಯ ೭೦ ರನ್‌ಗಳ ಜೊತೆಯಾಟ ಪ್ರದರ್ಶಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಪರಿಣಾಮ ಯುಪಿ ೧೯.೫ ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೧೭೫ ರನ್ ಗಳಿಸಿ, ತಂಡ ರೋಚಕ ಜಯ ಸಾಧಿಸಿತು. ಸಿಡಿಲಬ್ಬರದ ಇನ್ನಿಂಗ್ಸ್ ಪ್ರದರ್ಶಿಸಿದ ಹ್ಯಾರಿಸ್ ಕೇವಲ ೨೬ ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿ ಅಜೇಯ ೫೯ ರನ್ ಗಳಿಸಿದರೆ ಎಕ್ಲೆಸ್ಟನ್ ೧೨ ಎಸೆತಗಳಲ್ಲಿ ಅಜೇಯ ೨೨ ರನ್ ಸಿಡಿಸಿದರು. ಗುಜರಾತ್ ಪರ ಕಿಮ್ ಗಾರ್ತ್ ಐದು ವಿಕೆಟ್ ಪಡೆದರು.