ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಪಾಟೀಲರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಇಂಡಿ:ಮೇ.22:ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಸರಳ ಸಜ್ಜನಿಕೆಯ ವ್ಯಕ್ತಿ ಹಾಗೂ ಅಭಿವೃದ್ಧಿ ಹರಿಕಾರ ಮತ್ತು ಯಾವುದೇ ಜಾತಿ, ಮತ, ಪಂಥ ಎನ್ನುವ ಗೋಜಿಗೆ ಹೋಗದೆ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು,ಹಿಂದುಳಿದ ಇಂಡಿ ತಾಲೂಕಿನ ಅಭಿವೃದ್ದಿ ಹಿತದೃಷ್ಠಿಯಿಂದ ಶಾಸಕ ಯಶವಂತರಾಯಗೌಡ ಪಾಟಿಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಅಸ್ಪೃಶ್ಯ ಜಾತಿಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಸೋಮಶೇಖರ ಮ್ಯಾಕೇರಿ, ಕಾರ್ಯದರ್ಶಿ ರಾಜು ಪಡಗಾನೂರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದ್ದಾರೆ.

40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 2018ರಲ್ಲಿ ಪೂರ್ಣಗೋಳಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.ಇದರೊಂದಿಗೆ 2018ರಲ್ಲಿ ಜೆಡಿಎಸ್-ಕಾಂಗ್ರೆಸನ ಎಚ್.ಡಿ.ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾಗಿ,ರಾಜ್ಯದಲ್ಲಿ ಉತ್ತಮ ಆಡಳಿತ ಮಾಡಿದ್ದಾರೆ.ಸರ್ಕಾರ ವಹಿಸಿದ್ದ ಮಂಡಳಿಯ ಅಧ್ಯಕ್ಷತೆಯನ್ನು ಜವಾಬ್ದಾರಿ, ಬಹಳ ನಿಷ್ಠೆ, ಪ್ರಮಾಣಿಕತೆಯಿಂದ ನಿಭಾಯಿಸಿ ಕ್ಷೇತ್ರದ ಜನತೆಯ ಮನಸ್ಸಿನಲ್ಲಿ ಅಚ್ಚಳಿಯದಂತೆ ಮೂಡಿದ್ದಾರೆ.ಇಂತಹ ಮೇರು ವ್ಯಕ್ತಿತ್ವದ ಶಾಸಕರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉನ್ನತ ಮಟ್ಟದ ಖಾತೆಯನ್ನು ನೀಡುವುದರ ಮೂಲಕ ಈ ಭಾಗದ ಅಭಿವೃದ್ದಿಗೆ ಸಹಕಾರ ನೀಡಬೇಕು.

ಹಲವು ದಶಕಗಳಿಂದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನವೇ ಸಿಕ್ಕಿಲ್ಲ,ಸಚಿವ ಸ್ಥಾನವಂಚಿತ ಎಂಬ ಹಣೆಪಟ್ಟಿ ಹೊಂದಿದ ತಾಲೂಕಿಗೆ ಸಚಿವ ಸ್ಥಾನ ನೀಡಿ ಹಣೆಪಟ್ಟಿ ಅಳಿಸಬೇಕು.ಇಂಡಿ ಕ್ಷೇತ್ರ ಸರ್ವಾಂಗೀಣ ಅಭಿವೃದ್ದಿಗಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು.ಸಾಕಷ್ಟು ರಾಜಕೀಯ,ಅಭಿವೃದ್ದಿ ಜ್ಞಾನ ಹೊಂದಿರುವ ಇವರಿಗೆ ಯಾವುದೇ ಖಾತೆ ನೀಡಿದರು ಸಮರ್ಪಕವಾಗಿ ನಿಭಾಯಿಸುತ್ತಾರೆ .ಹೀಗಾಗಿ ಗಡಿಭಾಗದ ಅಭಿವೃದ್ದಿಯ ಹಿತದೃಷ್ಠಿಯಿಂದ ಶಾಸಕ ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು.ಇಲ್ಲದೆ ಹೊದರೆ ಇಂಡಿ ಜನರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮಲ್ಲಿಕಾರ್ಜುನ ಮಡ್ಡಿಮನಿ, ಯಲ್ಲಪ್ಪ ಕೊಳೂರಗಿ,ಪರಶುರಾಮ ಗಾಯಕವಾಡ, ನಾಗೇಶ ತಳಕೇರಿ,ನಾಗೇಂದ್ರ ಮೇತ್ರಿ,ಮಹಾದೇವ ಹೊಸಮನಿ, ಶರಣಬಸು ಕಟ್ಟಿಮನಿ, ಹಣಮಂತ ಹೊಸಮನಿ,ಕಲ್ಲಪ್ಪ ಅಂಜುಟಗಿ,ಗಂಗಾಧರ ಬೇಡರ,ಸಂಜೀವ ಅಹಿರಸಂಗ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.