
ಕೋಲಾರಮಾ,೨೯:ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೇ ಜತೆಯಲ್ಲೇ ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲೂ ಪಾಲ್ಗೊಳ್ಳುವ ಮೂಲಕ ಸಾಧಕರಾಗಿ ಹೊರಹೊಮ್ಮಬಹುದಾಗಿದೆ ಎಂದು ಜಿಲ್ಲೆಯ ಮಾಲೂರಿನ ಕೆಎಲ್‌ಇ ಸಂಸ್ಥೆಯ ನಂಜಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಕೆ.ಜಯಪ್ರಕಾಶ್ ಕರೆ ನೀಡಿದರು.
ಕೋಲಾರ ಜಿಲ್ಲಾಮಟ್ಟದ ಹ್ಯಾಂಡ್‌ಬಾಲ್ ಕ್ರೀಡೆಯಲ್ಲಿ ಶಾಲೆಯಿಂದ ಪ್ರತಿನಿಧಿಸಿ ವಿಜೇತರಾಗಿ ಇದೀಗ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿರುವ ಶಾಲೆಯ ಮಕ್ಕಳನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಓದಿಗೆ ಅಗತ್ಯವಾದ ಕ್ರಿಯಾಶೀಲತೆ ತರುತ್ತದೆ, ನಿಮ್ಮಲ್ಲಿನ ಸೋಮಾರಿತನ ಹೋಗಲಾಡಿಸಿ, ಸದಾ ಲವಲವಿಕೆಯಿಂದ ಮುನ್ನಡೆಯಲು ಪ್ರೇರಣೆ ನೀಡುತ್ತದೆ ಎಂದ ಅವರು, ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಧಕರಾಗಿ ಎಂದು ಕಿವಿಮಾತು ಹೇಳಿದರು.
ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು, ಸೋತರೆ ಬೇಸರ ಅಗತ್ಯವಿಲ್ಲ ಅದು ಗೆಲುವಿನ ಮೆಟ್ಟಿಲಾಗುವಂತೆ ಮುಂದಿನ ಬಾರಿ ಗೆಲುವನ್ನು ವರಿಸಲು ಪ್ರೇರಣೆ ನೀಡುವಂತಿರಬೇಕು ಎಂದ ಅವರು, ಪಠ್ಯದಷ್ಟೇ ಕ್ರೀಡೆಗಳು ಸಮಾನ ಮಾನ್ಯತೆ ಇದ್ದು, ಪಠ್ಯದಲ್ಲಿ ವಿಫಲವಾದ ಅನೇಕರು ಕ್ರೀಡಾಸಾಧಕರಾಗಿ ವಿಶ್ವಮಾನ್ಯರಾಗಿರುವುದನ್ನು ಕಾಣಬಹುದಾಗಿದೆ ಎಂದರು.
ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯೂ ಆಗಿದ್ದು, ಹಾಕಿ ಮಾಂತ್ರಿಕ ಧ್ಯಾನಚಂದ್ ನೆನಪಿನಲ್ಲಿ ಈ ದಿನವನ್ನು ಆಚರಿಸುತ್ತಿದ್ದು, ಇದೇ ದಿನ ಶಾಲೆಯಿಂದ ವಿಭಾಗಮಟ್ಟಕ್ಕೆ ಹೋಗಿರುವ ಸಾಧಕರನ್ನು ಅಭಿನಂದಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೂ, ದೈಹಿಕ ಶಿಕ್ಷಕ ಎಂ.ಎಸ್. ಅಸೂದೆ, ತಂಡದ ವ್ಯವಸ್ಥಾಪಕಿ ತನುಜಾ ವಿ. ಶೆಟ್ಟರ್ ಅವರಿಗೆ ಕೆಎಲ್‌ಇ ಸಂಸ್ಥೆಯ ಪರವಾಗಿ ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.