ಹೌರಾದಿಂದ ವಾಲಿಬಾಲ್ ತಂಡ ವಾಪಸ್

ಬೆಂಗಳೂರು,ಜೂ.೪:ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ವಾಲಿಬಾಲ್ ಕ್ರೀಡಾಪಟುಗಳು ಇಂದು ಬೆಳಿಗ್ಗೆ ತವರಿಗೆ ಆಗಮಿಸಿದರು.
ಕೊಲ್ಕತ್ತಾದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ೩೫ ಕ್ರೀಡಾಪಟುಗಳನ್ನು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬರಮಾಡಿಕೊಂಡರು. ಈ ಎಲ್ಲ ಕ್ರೀಡಾಪಟುಗಳು ಹೌರಾದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದರು. ಕರ್ನಾಟಕ ಮೂಲಕ ರೈಲ್ವೆ ಅಧಿಕಾರಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದು ಅಲ್ಲಿಯೇ ವಾಸ್ತವ್ಯವಿದ್ದು, ಈಗ ತವರಿಗೆ ವಾಪಸ್ಸಾಗಿದ್ದಾರೆ.
ಕೊಲ್ಕತ್ತಾದ ಚಾಂದ್ ನಗರದಲ್ಲಿ ನ್ಯಾಷನಲ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ರೈಲು ಅಪಘಾತದಿಂದಾಗಿ ಒಡಿಶಾದ ಹೌರಾ ಜಂಕ್ಷನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಈಗ ವಾಲಿಬಾಲ್ ತಂಡದ ಆಟಗಾರರನ್ನು ರಾಜ್ಯಸರ್ಕಾರ ಕೊಲ್ಕತ್ತಾದಿಂದ ವಿಮಾನದಲ್ಲಿ ಸುರಕ್ಷಿತವಾಗಿ ಕರೆತರುವಲ್ಲಿ ಸಫಲವಾಗಿದೆ.
ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಲಿಬಾಲ್ ತಂಡದ ತರಬೇತುದಾರರಾದ ಮಮತಾ ಶೆಟ್ಟಿ ದೇವರ ಆರ್ಶೀವಾದದಿಂದ ನಾವೆಲ್ಲರೂ ಸುರಕ್ಷಿತವಾಗಿ ವಾಪಸ್ ಬಂದಿದ್ದೇವೆ. ಚಾಂಪಿಯನ್‌ಶಿಪ್ ಮುಗಿಸಿ ಬಾಲಕ ಮತ್ತು ಬಾಲಕಿಯರ ತಂಡವು ಬೆಂಗಳೂರಿನತ್ತ ಹೊರಟಿದ್ದೆವು. ಬಾಲಕರ ತಂಡಕ್ಕೆ ಯಶವಂತಪುರ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಬುಕ್ ಆಗಿತ್ತು. ಆದರೆ, ಬಾಲಕಿಯರ ತಂಡಕ್ಕೆ ಟಿಕೆಟ್ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ದುರಂತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಚೆನ್ನೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬರಲು ತೀರ್ಮಾನಿಸಿದ್ದೆವು. ಆದರೆ, ಅಂತಿಮ ಘಳಿಗೆಯಲ್ಲಿ ಒಂದೇ ರೈಲಿನಲ್ಲಿ ಪ್ರಯಾಣ ಬೆಳೆಸಲು ನಿರ್ಧಾರ ಮಾಡಿದ್ದೆವು. ಹೀಗಾಗಿ, ಕೋರಮಂಡಲ್ ರೈಲಿನಲ್ಲಿ ಪ್ರಯಾಣ ಮಾಡಲಿಲ್ಲ. ಅದೃಷ್ಟವಶಾತ್ ಬದುಕಿ ಬಂದಿದ್ದೇವೆ ಎಂದು ತಮಗಾದ ಅನುಭವವನ್ನು ಹಂಚಿಕೊಂಡರು.
ಸಿಎಂಗೆ ಧನ್ಯವಾದ
ಹೌರಾದಿಂದ ವಾಪಸ್ ಬರಲು ನೆರವು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಾಲಿಬಾಲ್ ಕ್ರೀಡಾಪಟುಗಳು ಧನ್ಯವಾದ ತಿಳಿಸಿದ್ದಾರೆ. ರಾಜ್ಯಕ್ಕೆ ವಾಪಸ್ ಬರಲು ಹೆಣಗಾಡುತ್ತಿದ್ದ ರಾಜ್ಯ ಬಾಲಕ-ಬಾಲಕಿಯರ ವಾಲಿಬಾಲ್ ತಂಡಕ್ಕೆ ಕಾರ್ಮಿಕ ಸಚಿವ ಸಂತೋಷ್‌ಲಾಡ್ ನೆರವು ನೀಡಿ ಸುರಕ್ಷಿತವಾಗಿ ವಾಪಸ್ ಬರಲು ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವರಿಗೂ ಕ್ರೀಡಾಪಟುಗಳು ಧನ್ಯವಾದ ಅರ್ಪಿಸಿದ್ದಾರೆ.