ಹೌಥಿ ವಿರುದ್ಧ ಅಮೆರಿಕಾ, ಬ್ರಿಟನ್ ಮಿಲಿಟರಿ ಕ್ರಮ

ನ್ಯೂಯಾರ್ಕ್, ಜ.೧೧- ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ಖಂಡಿಸಿ ಕೆಂಪು ಸಮುದ್ರದಲ್ಲಿ ಸರಕು ಸಾಗಾಟ ಹಡಗುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಇರಾನ್ ಬೆಂಬಲಿತ, ಯೆಮೆನ್‌ನ ಹೌಥಿ ಬಂಡುಕೋರರ ವಿರುದ್ಧ ಮುಂದೆ ಅಮೆರಿಕಾ ಹಾಗೂ ಬ್ರಿಟನ್ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎನ್ನಲಾಗಿದೆ. ಈ ನಡುವೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹೌಥಿ ತನ್ನ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಹಡಗುಗಳ ಮೇಲೆ ಹೌಥಿ ಬಂಡುಕೋರರ ಉಡಾಯಿಸಿದ ೨೧ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಅಮೆರಿಕಾದ ವಾಹಕ-ಆಧಾರಿತ ಜೆಟ್‌ಗಳು ಮತ್ತು ಯುದ್ಧನೌಕೆಗಳು ಹೊಡೆದುರುಳಿಸಿದ್ದವು. ಸದ್ಯ ಕೆಂಪು ಸಮುದ್ರದಲ್ಲಿ ಹೌಥಿ ಬಂಡುಕೋರರ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದೆ ಅಮೆರಿಕಾ ಹಾಗೂ ಬ್ರಿಟನ್ ಪಡೆಗಳು ತೀವ್ರ ರೀತಿಯ ಮಿಲಟರಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ನಿನ್ನೆ ವಿಶ್ವಸಂಸ್ಥೆ ಕೂಡ ಹೌಥಿ ದಾಳಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಣಯವನ್ನು ಅಂಗೀಕರಿಸಿದೆ. ಜಾಗತಿಕ ವಾಣಿಜ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಹಾಗಾಗಿ ಹೌಥಿಗಳು ತಕ್ಷಣವೇ ಎಲ್ಲಾ ದಾಳಿಗಳನ್ನು ನಿಲ್ಲಿಸಬೇಕು. ನ್ಯಾವಿಗೇಷನಲ್ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಮತ್ತು ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ದುರ್ಬಲಗೊಳಿಸುತ್ತಿದೆ? ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇನ್ನು ಯುಎನ್ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದರೆ ರಷ್ಯಾ, ಚೀನಾ, ಮೊಜಾಂಬಿಕ್ ಮತ್ತು ಅಲ್ಜೀರಿಯಾ ಮತದಾನದಿಂದ ದೂರು ಉಳಿದಿದ್ದವು. ಇನ್ನು ಯುಎನ್ ನಿರ್ಣಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೌಥಿ ವಕ್ತಾರ ಮೊಹಮ್ಮದ್ ಅಲಿ ಅಲ್-ಹೌಥಿ, ಇದೊಂದು ರಾಜಕೀಯ ಆಟವಾಗಿದೆ. ಗಾಜಾದಲ್ಲಿ ಹಮಾಸ್ ವಿರುದ್ಧ ಇಸ್ರೇಲ್‌ನ ಯುದ್ಧವನ್ನು ಪ್ರತಿಭಟಿಸಿ ನಾವು ಇಸ್ರೇಲಿ-ಸಂಬಂಧಿತ ಹಡಗುಗಳ ಮೇಲೆ ಮಾತ್ರ ದಾಳಿ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಇನ್ನು ಇಂಟರ್ ನ್ಯಾಷನಲ್ ಚೇಂಬರ್ ಆಫ್ ಶಿಪ್ಪಿಂಗ್ ಪ್ರಕಾರ, ಪ್ರಪಂಚದ ೨೦ ಪ್ರತಿಶತ ಕಂಟೈನರ್ ಹಡಗುಗಳು ಈಗ ಕೆಂಪು ಸಮುದ್ರದ ಹಾದಿಯನ್ನು ತಪ್ಪಿಸುತ್ತಿವೆ. ಬದಲಿಗೆ ಆಫ್ರಿಕಾದ ದಕ್ಷಿಣ ತುದಿಯ ಸುತ್ತಲೂ ಹೆಚ್ಚು ಉದ್ದವಾದ ಮಾರ್ಗವನ್ನು ಬಳಸುತ್ತಿವೆ.