ಹೌಥಿ ನೆಲೆಗಳ ಮೇಲೆ ಯುಎಸ್-ಬ್ರಿಟನ್ ದಾಳಿ

ನ್ಯೂಯಾರ್ಕ್, ಜ.೧೨- ಈಗಾಗಲೇ ಉಕ್ರೇನ್-ರಷ್ಯಾ ಹಾಗೂ ಇಸ್ರೇಲ್-ಹಮಾಸ್ ನಡುವಿನ ಕದನದಿಂದಾಗಿ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿದ್ದರೆ ಇದೀಗ ಅಮೆರಿಕಾ-ಬ್ರಿಟನ್ ಹಾಗೂ ಹೌಥಿ ನಡುವೆ ಮುಂದೆ ಕದನ ಆರಂಭವಾಗುವ ಸಾಧ್ಯತೆ ಇದೆ. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ನಡೆಸುತ್ತಿರುವ ಇರಾನ್ ಬೆಂಬಲಿತ ಹೌಥಿ ವಿರುದ್ಧ ಇದೀಗ ಯೆಮೆನ್‌ನಲ್ಲಿ ವಾಯುದಾಳಿ ನಡೆಸಲಾಗಿದೆ. ಸದ್ಯ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡುವುದಾಗಿ ಯೆಮೆನ್ ಮೂಲದ ಹೌಥಿ ಇದೀಗ ಆಕ್ರೋಶ ವ್ಯಕ್ತಪಡಿಸಿದೆ.
ಯೆಮೆನ್‌ನ ರಾಜಧಾನಿ ಸನಾದಲ್ಲಿ ಸಾದಾ ಮತ್ತು ಧಮರ್ ಮತ್ತು ಹೊಡೆಡಾ ಮೇಲೆ ಅಮೆರಿಕಾ-ಬ್ರಿಟನ್ ತೀವ್ರ ರೀತಿಯಲ್ಲಿ ಹೌಥಿ ಸಂಘಟನೆಗಳ ನೆಲೆಗಳ ಮೇಲೆ ದಾಳಿ ನಡೆಸಿದೆ. ಅಮೆರಿಕಾದ ಅಧಿಕಾರಿಯೊಬ್ಬರ ಪ್ರಕಾರ, ಯುದ್ದ ವಿಮಾನ, ಹಡಗು ಮತ್ತು ಜಲಾಂತರ್ಗಾಮಿ ನೌಕೆಗಳ ಮೂಲಕ ಹೌಥಿ ವಿರುದ್ಧ ದಾಳಿಗಳನ್ನು ನಡೆಸಲಾಗುತ್ತಿದೆ. ಒಂದು ಡಜನ್‌ಗಿಂತಲೂ ಹೆಚ್ಚು ಸ್ಥಳಗಳನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಮತ್ತು ಹೌಥಿಗಳ ಮಿಲಿಟರಿ ಸಾಮರ್ಥ್ಯವನ್ನು ದುರ್ಬಲಗೊಳಿಸಲು ದಾಳಿಗಳನ್ನು ಉದ್ದೇಶಿಸಲಾಗಿದೆ. ಅಲ್ಲದೆ ಇದು ಕೇವಲ ಸಾಂಕೇತಿಕವಲ್ಲ ಎಂದು ತಿಳಿಸಿದ್ದಾರೆ. ಇನ್ನು ಯೆಮೆನ್‌ನಲ್ಲಿ ಹೌಥಿ ಉಗ್ರರ ವಿರುದ್ಧದ ದಾಳಿಯ ಬಳಿಕ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಅಗತ್ಯವಿದ್ದರೆ ಮುಂದಿನ ಕ್ರಮವನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ. ಅಮೆರಿಕಾದ ಪಾಲುದಾರರು, ನಮ್ಮ ಸಿಬ್ಬಂದಿ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಅಥವಾ ಪ್ರತಿಕೂಲ ವ್ಯಕ್ತಿಗಳು ನ್ಯಾವಿಗೇಷನ್ ಸ್ವಾತಂತ್ರ್ಯವನ್ನು ಹಾಳುಮಾಡಲು ಅನುಮತಿಸುವುದಿಲ್ಲ ಎಂಬುದು ಈ ಉದ್ದೇಶಿತ ಸ್ಟ್ರೈಕ್‌ಗಳ ಸ್ಪಷ್ಟ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ದಾಳಿಯ ವಿರುದ್ಧ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಲಾಗುವುದು ಎಂದು ಅತ್ತ ಹೌಥಿ ಸಂಘಟನೆ ಘೋಷಿಸಿದೆ. ಯೆಮೆನ್‌ನಲ್ಲಿ ಅಮೆರಿಕಾ-ಬ್ರಿಟನ್ ನಡೆಸಿದ ದಾಳಿಗೆ ಮುಂದೆ ಸೂಕ್ತ ಬೆಲೆಯನ್ನು ತೆರಳಿದೆ ಎಂದು ಹೌಥಿ ಸಂಘಟನೆ ತಿಳಿಸಿದೆ. ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಮರ ಆರಂಭವಾದ ಬಳಿಕ ಕೆಂಪು ಸಮುದ್ರದಲ್ಲಿ ಸಾಗುವ ಸರಕು ಸಾಗಾಟ ಹಡಗುಗಳ ಮೇಲೆ ಹೌಥಿ ಉಗ್ರವಾದಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಇದರ ಪರಿಣಾಮ ಜಾಗತಿಕ ಪೂರೈಕೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಕೂಡ ಎದುರಾಗಿದೆ. ಮೂಲಗಳ ಪ್ರಕಾರ ೧೫ಕ್ಕೂ ಹೆಚ್ಚು ಬಾರಿ ಹಡಗುಗಳ ಮೇಲೆ ಹೌಥಿ ಸಂಘಟನೆ ದಾಳಿ ನಡೆಸಿದ್ದು, ಸದ್ಯ ಕೆಂಪು ಸಮುದ್ರದಲ್ಲಿ ಹಡಗುಗಳ ಕೂಡ ಸಾಗಲು ಹಿಂದೇಟು ಹಾಕುತ್ತಿದೆ. ಸದ್ಯ ಹೌಥಿಗಳ ವಿರುದ್ಧ ಈಗಾಗಲೇ ಒಕ್ಕೂಟ ರಚಿಸಿಕೊಂಡಿರುವ ಅಮೆರಿಕಾ ಹಾಗೂ ಬ್ರಿಟನ್ ಇದೀಗ ಯೆಮೆನ್‌ನಲ್ಲಿ ಉಗ್ರ ಸಂಘಟನೆಯ ಹಲವು ನೆಲೆಗಳ ಮೇಲೆ ತೀವ್ರ ರೀತಿಯಲ್ಲಿ ದಾಳಿ ನಡೆಸಲಾಗಿದೆ.