
ಔರಾದ :ಮಾ.9: ದೇಶದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ಆಚರಿಸಲಾಗುತ್ತದೆ. ಯಾವುದೇ ಜಾತಿ ಮತಗಳ ಭೇದವಿಲ್ಲದೆ ಒಟ್ಟಾಗಿ ಸೇರಿ ಬಣ್ಣಗಳ ಓಕುಳಿಯಾಟದಲ್ಲಿ ಮಿಂದೇಳುತ್ತಾರೆ. ಈ ವೈಶಿಷ್ಟ್ಯಪೂರ್ಣ ಹಬ್ಬ ದೊಡ್ಡವರು ಚಿಕ್ಕವರು ಎನ್ನದೆ ಪರಸ್ಪರ ಬಣ್ಣ ಎರಚುವ ಈ ಹೋಳಿ ಹಬ್ಬ ಪ್ರೀತಿ ಸೌಹರ್ದತೆಗೆ ಹೆಸರು.
ತಾಲ್ಲೂಕಿನಾದ್ಯಂತ ರಂಗು ರಂಗಿನ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಮುಂಜಾನೆಯಿಂದಲೇ ಯುವಕರ ಗುಂಪುಗಳು ವಿವಿಧೆಡೆಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿತ್ತು. ದಾರಿ ಹೋಕರು ಹಾಗೂ ಬೈಕ್‍ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು.
ಎಲ್ಲೆಡೆ ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದು ಕಂಡು ಬಂತು. ಕೆಲವರು ಬೈಕ್ ಮೇಲೆ ಸವಾರಿ ಹೊರಟು ವಿವಿಧ ರಸ್ತೆಗಳಲ್ಲಿ ಸಂಚರಿಸುತ್ತಾ ಗೆಳೆಯ-ಗೆಳತಿಯರಿಗೆ ಪರಸ್ಪರ ಬಣ್ಣ ಹಾಕಿ ಶುಭಾಶಯ ಕೋರಿದರು. ಮತ್ತೆ ಕೆಲವರು ರಸ್ತೆ ಬದಿಯಲ್ಲಿ ನಿಂತು ಬಣ್ಣದ ನೀರು ಎರಚುತ್ತಿದ್ದರು. ಮಕ್ಕಳು ಪಿಚ್ಕಾರಿಗಳಲ್ಲಿ ಬಣ್ಣದ ನೀರು ಹಾರಿಸಿ ಖುಷಿಪಟ್ಟರು.
ಹಿರಿಯರು ಕಿರಿಯರೆನ್ನದೆ ಬೆಳಿಗ್ಗೆಯಿಂದಲೇ ಪ್ರೀತಿ ಪಾತ್ರರಿಗೆ ಬಣ್ಣ ಎರಚಿ ಖುಷಿಪಟ್ಟರು. ಮಕ್ಕಳೆಲ್ಲ ಪಿಚಕಾರಿಗಳನ್ನು ಹಿಡಿದು ರಸ್ತೆಯಲ್ಲಿ ಹೋಗಿ ಬರುವವರ ಮೇಲೆ ಬಣ್ಣದ ನೀರನ್ನು ಎರಚಿ ಸಂಭ್ರಮಿಸಿದರು.