ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಲು ಮನವಿ

ಕಲಬುರಗಿ,ಮಾ.04:ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಪ್ರಯುಕ್ತ 2023 ರ ಮಾರ್ಚ್ 7 ರಂದು ಮಂಗಳವಾರದಂದು ಕಾಮದಹನ ಮತ್ತು ಮಾರ್ಚ್ 8 ರಂದು ಬುಧುವಾರದಂದು ಧುಲಂಡಿಯನ್ನು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅವರು ಶನಿವಾರದಂದು ಕಲಬುರಗಿಯಲ್ಲಿ ಹೋಳಿ ಹಬ್ಬ ಆಚರಣೆಯ ಅಂಗವಾಗಿ ಕರೆಯಲಾದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಕಲಬುರಗಿ ಹಾಗೂ ಜಿಲ್ಲೆಯಾದ್ಯಂತ ಹೋಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯ ಶಾಂತಿ ಸಮಿತಿ ಸಭೆ ಏರ್ಪಡಿಸಲಾಗಿದೆ ಎಂದರು.
ಮಂಗಳವಾರ ಮಾರ್ಚ್ 7 ರಂದು ಷಬ್-ಎ-ಬರಾತ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ರಾತ್ರಿ ಜಾಗರಣೆ ಮಾಡಲಿದ್ದು, ಪರಸ್ಪರ ಕೋಮು ಸೌಹಾರ್ಧತೆ ಕಾಪಾಡಿಕೊಳ್ಳಬೇಕೆಂದು ಧಾರ್ಮಿಕ ಮುಖಂಡರ ಸಭೆಯಲ್ಲಿ ಹೇಳಿದರು.
ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಮಾರ್ಚ್ 8 ರಂದು ಮಧ್ಯಾಹ್ನ 12 ಗಂಟೆಯವರೆಗೆ ಬಣ್ಣದ ಆಟವನ್ನು ಆಡಬೇಕು. ಬಂಡೆಯಲ್ಲಿ ಬಣ್ಣ ಎಲ್ಲಿಂದ ಪ್ರಾರಂಭವಾಗುತ್ತದೆ ಅಲ್ಲಿನ ಪೋಲಿಸ್ ಸ್ಟೇóಷನ್ ತಾವು ಅರ್ಜಿ ಸಲ್ಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕೆಂದರು.
ಹಬ್ಬದ ದಿನಗಳಂದು ಸಾರ್ವಜನಿಕರು ಚರ್ಮಕ್ಕೆ ಹನಿಕಾರಕವಲ್ಲದ ನೈಸರ್ಗಿಕವಾದ ಬಣ್ಣ ಮಾತ್ರ ಉಪಯೋಗಿಸಬೇಕು. ಹಬ್ಬ ಆಚರಣೆ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಣ್ಣವನ್ನು ಯಾರಿಗೂ ಒತ್ತಾಯವಾಗಿ ಹಚ್ಚದಂತೆ ಎಚ್ಚರಿಕೆ ವಹಿಸಬೇಕು. ಹಬ್ಬವನ್ನು ಸಂತೋಷದಿಂದ ಆಚರಿಸಬೇಕೇ ವಿನ: ಯಾರಿಗೂ ತೊಂದರೆಯಾಗಬಾರದು. ಎಲ್ಲ ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು. ಮಂಗಳವಾರ ಮತ್ತು ಬುಧುವಾರದಂದು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಚರ್ಚಿಸಿ ವಿವಿಧ ಬಡಾವಣೆಗಳಿಗೆ ನೀರು ಪೂರೈಸುವ ಅವಧಿಯನ್ನು ಪ್ರಚುರಪಡಿಸಬೇಕು ಎಂದು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಹಬ್ಬ ಆಚರಣೆ ಎರಡೂ ದಿನಗಳಂದು ಸಂಜೆಯಿಂದ ಸಮರ್ಪಕ ರೀತಿಯಲ್ಲಿ ಹಾಗೂ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುವಂತೆ ಅಗತ್ಯ ಮುನ್ನೆಚರಿಕೆ ಕ್ರಮ ಕೈಗೊಳ್ಳಬೇಕು. ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಕಲಬುರಗಿ ಮಹಾನಗರ ಪಾಲಿಕೆಯಿಂದ ಕಾಮದಹನ ಬಳಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಲ್ಲದೇ ನಗರದಾದ್ಯಂತ ಬೀದಿ ದೀಪಗಳನ್ನು ಅಳವಡಿಸುವ ವ್ಯವಸ್ಥೆ ಮಾಡಬೇಕು. ನಗರದ ಬೀದಿ ದೀಪಗಳನ್ನು ಸಹ ಸರಿಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಈ ದಿನಗಳಂದು ಅಕ್ರಮವಾಗಿ ಮದ್ಯ ಮಾರಾಟವಾಗುವುದನ್ನು ನಿರ್ಬಂಧಿಸಲು ಅಬಕಾರಿ ಇಲಾಖೆ ವಿಶೇಷ ಗಮನ ಹರಿಸಬೇಕು ಹಾಗೂ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದರು. ನಗರದ ಪೋಲಿಸ್ ಆಯುಕ್ತರಾದ ಚೇತನ್ ಆರ್. ಮಾತನಾಡಿ ಮೋಟರ್ ಬೈಕ್‍ಗಳ ಸೈಲೆನ್ಸರ್ ತೆಗೆದು ಓಡಿಸುವವರ ವಿರುದ್ಧ ಸಹ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭದಲ್ಲಿ ಶಾಂತಿಭಂಗವನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ ಯಾವುದೇ ಅಹಿತರ ಘಟನೆ ಸಂಭವಿಸದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು. ಯಾವುದೇ ತೊಂದರೆಯಾದರೆ 112 ಕರೆ ಮಾಡಲು ತಿಳಿಸಿದರು. ಕಿಡಿಗೇಡಿಗಳನ್ನು ನಿರ್ಬಂಧಿಸಲು ಅನುಕೂಲವಾಗುವಂತೆ ಹೆಚ್ಚು ಸಂಚಾರಿ ಪೊಲೀಸ್ ತಂಡಗಳನ್ನು ರಚಿಸಲಾಗುವುದಲ್ಲದೇ ಹೋಳಿ ಹಬ್ಬದ ಪ್ರಯುಕ್ತ ಎರಡು ದಿನಗಳಂದು ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದರು.

ವೇದಿಕೆ ಮೇಲೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿ.ಸಿ.ಪಿ. ಶ್ರೀನಿವಾಸ ಅಡ್ಡೂರ, ಎ.ಸಿ.ಪಿ. ದೀಪನ್ .ಎಮ.ಎನ್. ಇದ್ದರು.

ಈ ಸಭೆಯಲ್ಲಿ ಸಮಿತಿ ಸದಸ್ಯ ಹಾಗೂ ನಾಗರಿಕರಾದ ಬಾಬುರಾವ ಜಹಾಗಿರದಾರ, ಜಾವೇದ್ ಖಾನ್ , ಸೇರಿದಂತೆ ವಿವಿಧ ಧರ್ಮಗಳ ಮುಖಂಡರು, ಹಿರಿಯ ನಾಗರಿಕರು ಹಲವಾರು ಸೂಕ್ತ ಸಲಹೆಗಳನ್ನು ನೀಡಿದರು. ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.