ಹೋಳಿ ಹಬ್ಬದ ಪ್ರಯುಕ್ತ ಹನುಮಂತನ ಮೆರವಣಿಗೆ

ಔರಾದ :ಮಾ.30: ಪ್ರತಿ ವರ್ಷ ಹೋಳಿ ಹಬ್ಬದ ಪ್ರಯುಕ್ತ ಔರಾದ ಪಟ್ಟಣದಲ್ಲಿ ಆನೆ ಮೇಲೆ ಹನುಮಂತನ ಸವಾರಿಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ಔರಾದ ಪಟ್ಟಣದಲ್ಲಿ ಪ್ರತಿ ವರ್ಷ ಹೋಳಿ ಹಬ್ಬದಂದು ನಡೆಯುವ ಪಾರಂಪರಿಕವಾಗಿ ನಡೆದು ಬರುತ್ತಿರುವ ಆನೆ ಮೇಲೆ ಹನುಮಂತನ ಸವಾರಿಯ ಮೆರವಣಿಗೆ ಅದ್ದೂರಿ ಹಾಗೂ ಸಡಗರದಿಂದ ಆಚರಿಸಲಾಯಿತು. ಹೋಳಿ ಹುಣ್ಣಿಮೆಯ ಕಾಮ ದಹನದ ಮಾರನೇ ದಿನ ಬಣ್ಣ ಆಡಿದ ನಂತರ ಸಾಯಂಕಾಲ ಶವದ ಮೆರವಣಿಗೆ ನಡೆಯುತ್ತದೆ ಅದಾದನಂತರ ರಾತ್ರಿ ಆನೆ ಮೇಲೆ ಆಂಜನೇಯ ದೇವರ ಮೆರವಣಿಗೆ ನಡೆಯುತ್ತದೆ ಇದು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಪದ್ಧತಿ, ಮುಂಜಾನೆ ಬಣ್ಣದ ಒಕೂಳಿಯಲ್ಲಿ ಮಿಂದೆದ್ದ ಯುವಕರು ಸಾಯಂಕಾಲ ಶವದ ಅಣುಕು ಮೆರವಣಿಗೆ ನಡೆಸುತ್ತಾರೆ, ಪಟ್ಟಣದ ವಿವಿಧ ಓಣಿಗಳ ಮುಖಾಂತರ ಮೆರವಣಿಗೆ ಮಾಡಲಾಗುತ್ತದೆ. ಹಿರಿಯರು ಕಿರಿಯರ ಅನ್ನದೆ ಸರ್ವರೂ ಈ ಸಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ನಂತರ ರಾತ್ರಿ ಎತ್ತಿನ ಬಂಡಿಯ ಮೇಲೆ ಆನೆಯನ್ನು ತಯಾರಿಸುತ್ತಾರೆ, ನಂತರ ಬಂಡಿಯನ್ನು ದೀಪಾಂಲಕಾರ ಮಾಡಿ ಆ ಆನೆಯ ಮೇಲೆ ಆಂಜನೇಯನ ವೇಷಧಾರಿಯನ್ನು ನಿಲ್ಲಿಸಿ ಅವರ ಕೈಯಲ್ಲಿ ಗಧೆಯನ್ನು ಹಿಡಿದು ಬ್ಯಾಂಡ್ ಬಾಜಾ ಭಜಂತ್ರಿಯೊಂದಿಗೆ ಪಟ್ಟಣದ ಶೆಟಕಾರ ಗಲ್ಲಿ, ಪಠಾನ ಗಲ್ಲಿ, ದೇಶ‌ಮುಖ ಗಲ್ಲಿ ಸೇರಿದಂತೆ ವಿವಿಧ ಬೀದಿಗಳಿಂದ ಮೆರವಣಿಗೆ ಮೂಲಕ ಹಬ್ಬ ಆಚರಣೆ ಮಾಡುವ ಸಂಪ್ರದಾಯವಿದೆ. ಈ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿ ಹಬ್ಬವನ್ನು ಆಚರಿಸುತ್ತಾರೆ.