ಹೋಳಿ ಹಬ್ಬ:ಕಾಮನ ಪ್ರತಿಷ್ಠಾಪನೆ

ಮರಿಯಮ್ಮನಹಳ್ಳಿ, ಮಾ.28: ಮರಿಯಮ್ಮನಹಳ್ಳಿಯ ಮೂರನೇ ವಾರ್ಡಿನ ಬ್ರಾಹ್ಮಣರ ಓಣಿಯಲ್ಲಿ ಬ್ರಾಹ್ಮಣ ಸಮಾಜದವತಿಯಿಂದ ಹೋಳಿ ಹಬ್ಬದ ಪ್ರಯುಕ್ತ ಕಾಮ ಪ್ರತಿಭಟನೆ ಮಾಡಿ ಸಂಭ್ರಮಿಸಲಾಯಿತು.
ಹಬ್ಬವನ್ನು ಐತಿಹಾಸಿಕ ನಾರಾಯಣದೇವರಕೆರೆ (ಈಗಿನ ಮರಿಯಮ್ಮನಹಳ್ಳಿ) ಸ್ಥಳಾಂತರಗೊಂಡ ದಿನದ ಸುಮಾರು 58 ರಿಂದ 60 ವರ್ಷಗಳಿಂದಲೂ ತ್ರಯೋದಶಿ, ಚತುರ್ದಶಿ ಹಾಗೂ ಹುಣ್ಣಿಮೆಯ ಮೂರು ದಿನಗಳ ಕಾಲ ಕಾಮನ ಮೂರ್ತಿಯನ್ನು ಪ್ರತಿಭಟನೆಮಾಡಿ ಹಬ್ಬವನ್ನು ಆಚರಿಸಲಾಗುವುದು. ಅದೇ ರೀತಿ ಮರಿಯಮ್ಮನಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ಬ್ರಾಹ್ಮಣರ ಸಮಾಜ, ಆರ್ಯ ವೈಶ್ಯ ಸಮಾಜ ಹಾಗೂ ಊರಿನ ಪರವಾಗಿ ಲಕ್ಷ್ಮಿನಾರಾಯಣ ಸ್ವಾಮಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಾಮನ ಮೂರ್ತಿಯನ್ನು ಕೂಡಿಸುವುದು ವಾಡಿಕೆಯಾಗಿತ್ತು. ಪ್ರಸ್ತುತ ಕಳೆದ ಕೆಲವು ವರ್ಷಗಳಿಂದ ಮೂರನೇ ವಾರ್ಡಿನ ಮದಕರಿನಾಯಕ ನಗರದಲ್ಲಿಯೂ ಕಾಮನ ಪ್ರತಿಭಟನೆ ಮಾಡಿ ಹಬ್ಬದ ಆಚರಣೆ ನಡೆಯುತ್ತಿದೆ. ಪ್ರತಿವರ್ಷವೂ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ನಾಲ್ಕು ಕಾಮನ ಮೂರ್ತಿಗಳು ಪ್ರತಿಭಟನೆಗೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಹೋಳಿ ಹುಣ್ಣಿಮೆ ಅಥವಾ ಕಾಮನ ಹಬ್ಬದ ಆಚರಣೆಯು ಪುರುಷರಿಗೆ ಶ್ರೀ ರಕ್ಷೆಯಾಗಿದೆ ಅಲ್ಲದೇ ಕಾಮನ ಆಶೀರ್ವಾದವಾಗಿದೆ. ಈ ಬಾರಿ ಮೂರನೇ ದಿನವಾದ ಹುಣ್ಣಿಮೆಯು ಭಾನುವಾರ ಬಂದಿದ್ದು, ಅಂದು ರಾತ್ರಿ ಹೋಳಿ ಹುಣ್ಣಿಮೆಯ ಪ್ರಯುಕ್ತ ಕಾಮ ದಹನವನ್ನು ಮಾಡಿ ಸೋಮವಾರದ ಪಾಡ್ಯದ ದಿನ ಬಣ್ಣದೋಕುಳಿ ಆಡಿ ಸಂಭ್ರಮಿಸುವುದು ವಾಡಿಕೆ. ಅಂದು ರಾತ್ರಿ ಹೋಳಿ ಆಡಿದ ಎಲ್ಲರೂ ಸೇರಿ ಸಂಭ್ರಮದ ಭೋಜನ ಕೂಟ(ಪ್ರಸ್ತ) ಮಾಡುವರು ಎಂದು ಬ್ರಾಹ್ಮಣ ಸಮಾಜದ ಶ್ರೀಧರ ಶಾಸ್ತ್ರಿ ಪತ್ರಿಕೆಗೆ ತಿಳಿಸಿದರು.
ಕೊರೋನಾ ರೋಗದ ಸೋಂಕು ಹರಡುವಿಕೆಯ ಎರಡನೇ ಅಲೆ ಪ್ರಾರಂಭವಾಗಿದ್ದು, ಸೋಮವಾರದ ಪಾಡ್ಯದ ದಿನದ ಬಣ್ಣದೋಕುಳಿಯ ಸಂಭ್ರಮಕ್ಕೆ ಕಡಿವಾಣ ಬೀಳುವ ಸಾಧ್ಯತೆಯೂ ಇಲ್ಲದಿಲ್ಲ. ಸರ್ಕಾರ ಎರಡನೇ ಅಲೆಯ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನಲೆಯಲ್ಲಿ ರಾಜ್ಯಾದಾದ್ಯಂತ ಯಾವುದೇ ಜಾತ್ರೆ, ಸಭೆ ಸಮಾರಂಭಗಳು ನಡೆಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಸೋಮವಾರದ ಬಣ್ಣದೋಕುಳಿಗೆ ಪರವಾನಿಗೆ ದೊರೆಯುವುದೇ ಅಥವಾ ಕಡಿವಾಣ ಬೀಳುವುದೇ ಕಾದು ನೋಡಬೇಕಿದೆ.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಮುಖಂಡ ಹಾಗೂ ಪ.ಪಂ. ಸದಸ್ಯ ಡಿ.ನರಸಿಂಹ ಮೂರ್ತಿ, ಶ್ರೀರಾಮ ಶಾಸ್ತ್ರಿ, ಡಿ. ವಿಶ್ವನಾಥ, ವಸುದೇಂದ್ರ, ಪ್ರಭಾಕರ ಭಟ್ಟ, ಅರ್ಚಕ ಭೀಮಣ್ಣ ಪೂಜಾರ್, ಹನುಮಂತ ಗೌಡ ಹಾಗೂ ಇತರರು ಇದ್ದರು.