ಹೋಳಿ ರಂಗಿನಾಟ : ಆರಂಭಕ್ಕೆ ಹಂಪಿಯೇ ಮೂಲ.

ಅನಂತ ಜೋಶಿ
ಹೊಸಪೇಟೆ, ಮಾ.28: ರಾಷ್ಟ್ರವ್ಯಾಪಿ ಆಚರಣೆಯಾಗುವ ಹೋಳಿಹುಣ್ಣಿಮೆಯ ಕಾಮದಹನ ಹಾಗೂ ಮಾರನೇ ದಿನ ಆಚರಿಸುವ ಚಿತ್ತಾಕರ್ಷಕ ರಂಗಿನಾಟದ ಮೂಲ ಕೇಂದ್ರ ಹಂಪಿ!. ಹೌದು, ಈ ಬಗ್ಗೆ ಮಹತ್ವದ ಪೌರಾಣಿಕ ದಾಖಲೆಗಳಿದ್ದರೂ ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ಹಂಪಿಯಲ್ಲಿ ವಿರೂಪಾಕ್ಷ ಹಾಗೂ ಪಂಪಾಂಬಿಕೆಯ ಫಲಪೂಜೆ ಹಾಗೂ ಮುಂದೆ ನಡೆಯುವ ಜಾತ್ರಾಮಹೋತ್ಸವಗಳ ಹಿನ್ನಲೆಯನ್ನು ಮೆಲುಕು ಹಾಕಿದಾಗ ಈ ಬಗ್ಗೆ ಕಾಮದಹನ ಹಾಗೂ ಓಕುಳಿ ಹಬ್ಬಗಳ ಮಹತ್ವ ಸ್ಕಂದ ಪುರಾಣದ ಮೂಲಕ ತಿಳಿಯುತ್ತದೆ. ಕೇವಲ ಐತಿಹಾಸಿಕ ಕೇಂದ್ರ ಎಂದಷ್ಟೆ ನೋಡುವ ಹಂಪಿಯನ್ನು ಧಾರ್ಮಿಕ ಪುಣ್ಯಕ್ಷೇತ್ರ ಎಂಬ ಮೂಲವನ್ನು ನಾವು ಮರೆಯುತ್ತಿದ್ದೇವೆ.
ಪೌರಾಣಿಕ ಹಿನ್ನೆಲೆ :
ಸ್ಕಂದ ಪುರಾಣದಲ್ಲಿ ದಾಖಲಾದ ಮಾಹಿತಿಯಂತೆ ಬಾಲ್ಯದಿಂದಲೇ ಶಿವನ ಮಹಿಮೆಯನ್ನು ತಿಳಿದ ಪಾರ್ವತಿದೇವಿ, ಶಿವಭಕ್ತಿ ಪಾರಾಯಣಳಾಗಿ ಪಂಪಾ ಸರೋವರದ ಬಳಿ ಶಿವನನ್ನು ಒಲಿಸಿಕೊಂಡು ವಿವಾಹವಾಗಲು ತಪೋನಿರತಳಾಗಿರುತ್ತಾಳೆ. ಬಹಳ ದಿವಸ ತಪಸ್ಸು ಮಾಡಿದರೂ ಶಿವನು ಜಾಗೃತನಾಗುವುದಿಲ್ಲ. ಆಗ ಉಪಾಯ ಕಾಣದ ದೇವತೆಗಳು ಶಿವನನ್ನು ಜಾಗೃತಗೊಳಿಸಲು ಮುಂದಾಗುತ್ತಾರೆ. óಋತುರಾಜ ವಸಂತನೊಂದಿಗೆ ಬರುವ ಕಾಮನ ಮನ್ಮಥಬಾಣ ಶಿವನಿಗೆ ತಗುಲಿ ತಪೋಭಂಗನಾದ ಶಿವನು ಕೋಪದಿಂದ ಕಾಮನನ್ನು ಸುಡಲು ತನ್ನ ಅಕ್ಷಿ (ಕಣ್ಣು) (ವಿರೂಪ+ಅಕ್ಷ=ವಿರೂಪಾಕ್ಷ) ತೆಗೆಯಲಾಗಿ ಕಾಮ ಸುಟ್ಟು ಬೂದಿಯಾಗುತ್ತಾನೆ. ದೇವತೆಗಳ ಪ್ರಾರ್ಥನೆಯಿಂದ ಶಾಂತನಾದ ಶಿವನು ಗಿರಿಜೆಯನ್ನು ವಿವಾಹವಾಗಲು ಒಪ್ಪುತ್ತಾನೆ. ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಸಮ್ಮುಖದಲ್ಲಿ ಹಂಪಿಯ ಚಕ್ರತೀರ್ಥದ ಬಳಿ ಇರುವ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪಾಣಿಗ್ರಹಣಕ್ಕೆ ನಿಶ್ಚಯವಾಗುತ್ತದೆ. ವಿರೂಪಾಕ್ಷೇಶ್ವರ ದೇವಾಲಯದ ಪ್ರಾಂಗಣದಲ್ಲಿ ಇರುವ ವಿರೂಪಾಕ್ಷೇಶ್ವರನ ಮಹಿಮೆಯನ್ನು ಸಾರುವ ಚಿತ್ರಗಳೇ ಈ ಮೇಲಿನ ಘಟನೆಯನ್ನು ದಾಖಲಿಸುತ್ತವೆ. ಇಂದಿಗೂ ಚಿತ್ರಗಳು ಈ ಕಥಾವೃತ್ತಾಂತವನ್ನು ಸಾರುತ್ತವೆ. ಈ ಮಹಿಮೆಯ ಪರಿಣಾಮವಾಗಿ ಹಂಪಿಯಲ್ಲಿ ಬಣ್ಣಗಳ ಹಬ್ಬ ಹೋಳಿ ಅತ್ಯಂತ ವೈಭವದಿಂದ ನಡೆಯುತ್ತದೆ. ಪ್ರಾಸಂಗಿಕ ಪ್ರವಾಸವೂ ಆಯಿತು, ಬಣ್ಣವೂ ಆಯಿತು ಎಂದು ಅನೇಕ ಕಡೆಗಳಿಂದ ಪ್ರವಾಸಿಗರು ಹಂಪಿಗೆ ಬರುತ್ತಾರೆ. ಅದರಲ್ಲೂ ದೇಶ ವಿದೇಶಗಳ ಪ್ರವಾಸಿಗರು ಸಹ ಬಣ್ಣ ಆಡಲೆಂದೇ ಹಂಪಿಗೆ ಬರುವಷ್ಟರ ಮಟ್ಟಿಗೆ ಮಹತ್ವ ಪಡೆದಿದೆ ಎಂಬುದು ಗಮನಾರ್ಹ. ಹಂಪಿ ಸ್ಮಾರಕಗಳು ಭಾರತೀಯ ಇತಿಹಾಸವನ್ನು ಹೇಳುವುದರ ಜೊತೆಗೆ ರಂಗಪಂಚಮಿಗೆ ಮೂಲ ಎಂಬದನ್ನೂ ತಿಳಿಸುವ ಮೂಲಕ ಹಂಪಿ ಮತ್ತಷ್ಟೂ ತನ್ನ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಂಡಿದೆ.
“ಧರ್ಮ ರಕ್ಷಣೆಗಾಗಿ ಜನ್ಮತಾಳಿದ ಸಾಮ್ರಾಜ್ಯ ವಿಜಯನಗರ ವಿಜಯನಗರ ಪೂರ್ವದಿಂದಲೂ ಇದೊಂದು ಪುಣ್ಯಕ್ಷೇತ್ರವಾಗಿತು ಎಂಬುದು ಇಂದು ಕ್ಷೀಣಿಸುತ್ತಿರುವುದು ವಿಷಾದನೀಯ ಇತಿಹಾಸದ ಯಾವುದೇ ಪುಟಗಳು ಸಹ ನಶಿಸಬಾರದು ಈ ಹಿನ್ನೆಲೆಯಲ್ಲಿ ಹಂಪಿ, ಧಾರ್ಮಿಕ ಪುಣ್ಯಕ್ಷೇತ್ರವಾಗಿಯೇ ಎಲ್ಲಾ ವಿಧದ ಆಚರಣೆಗಳೊಂದಿಗೆ ಮುಂದುವರೆಯಬೇಕು’’
ಮೋಹನ್ ಚಿಕ್ಕಭಟ್ ಜೋಶಿ
ಧಾರ್ಮಿಕ ಪಂಡಿತರು ಹಂಪಿ

“ಹೋಳಿ ಹಬ್ಬ ಕರೋನಾ ಹಿನ್ನೆಲೆಯಲ್ಲಿ ಮಂಕಾಗಿದ್ದರು ಧಾರ್ಮಿಕ ಆಚರಣೆಯ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ರಾಸಾಯನಿಕಯುಕ್ತ ಬಣ್ಣ, ಪೇಂಟ್‍ಗಳ ಬಳಕೆ ಸೇರಿದಂತೆ ಬದಲಾದ ಸನ್ನಿವೇಶದಲ್ಲಿ ಮೂಲಾರ್ಥದಲ್ಲಿ ಬಣ್ಣದ ಹಬ್ಬ ಆಚರಿಸಲು ಜನ ಮುಂದಾಗಬೇಕು”.

ಕೆ.ಪ್ರಕಾಶ್
ಹೊಸಪೇಟೆ ನಿವಾಸಿ