ಹೋಳಿ ಬಣ್ಣದಾಟ ನಿಷೇದ – ವಿಶ್ವನಾಥ ರಾವ್ ಕುಲಕರ್ಣಿ

ಸಿಂಧನೂರು.ಮಾ.೨೮-ಕೊರೊನಾ ಎರಡನೇ ಅಲೆ ಹರಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ಹೋಳಿ ಬಣ್ಣದಾಟವನ್ನು ಆಡಲು ನಿಷೇಧಿಸಲಾಗಿದೆಂದು ಡಿವಾಯ್‌ಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಹೇಳಿದರು.
ನಗರ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ಯ ಕರೆದಿದ್ದ ವಿವಿಧ ಸಮಾಜ ಹಾಗೂ ಸಂಘಟನೆಗಳ ಮುಖಂಡರುಗಳ ಶಾಂತಿ ಸಭೆಯಲ್ಲಿ ಮಾತನಾಡಿದರು ಅವರು ಸಂಜೆ ೮ ಗಂಟೆಯಿಂದ ರಾತ್ರಿ ೧೦ ಗಂಟೆಯೊಳಗೆ ಕಾಮದಹನ ಮಾಡಬಹುದು ಆದರೆ ಸಾರ್ವಜನಿಕರ ಬಣ್ಣ ಆಚರಣೆಗೆ ನಿಷೇಧಿಸಲಾಗಿದೆ ಇದಕ್ಕೆ ಸಾರ್ವಜನಿಕರು ಪೋಲಿಸರ ಜೊತೆ ಕೈ ಜೋಡಿಸಿ ಸರ್ಕಾರದ ಕೊರೊನಾ ನಿಯಮಗಳನ್ನು ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಕಳೆದ ವರ್ಷದಂತೆ ಈ ವರ್ಷವೂ ಸಹ ಸರ್ಕಾರ ಕೊವಿಡ್ -೧೯ ನಿಯಮಗಳನ್ನು ಜಾರಿಗೆ ತಂದಿದೆ ಸರ್ಕಾರದ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡದೆ ಕಡ್ಡಾಯವಾಗಿ ಪಾಲಿಸಬೇಕು.
ಕಳೆದ ವರ್ಷದಂತೆ ಈ ವರ್ಷವೂ ಸಹ ಸಾರ್ವಜನಿಕರು ಹಬ್ಬ ಹರಿದಿನಗಳನ್ನು ಆಚರಿಸಬೇಕು ಸ್ವಲ್ಪ ಯಾಮಾರಿದರೆ ಕೊರೊನಾ ಎರಡನೆ ಅಲೆ ಹರಡುವ ಅಪಾಯ ಇರುತ್ತದೆ ಕಳೆದ ವರ್ಷ ನಗರದ ಜನತೆ ಕೊರೊನಾ ನಿಯಮಗಳನ್ನು ಪಾಲಿಸಿ ಪೋಲಿಸ್ ಇಲಾಖೆ ಜೊತೆ ಕೈ ಜೋಡಿಸಿದ ಕಾರಣ ಕೊರೊನಾ ಸೊಂಕಿತರ ಸಂಖ್ಯೆ ಕಡಿಮೆ ಇದ್ದು ಜನರ ಸಹಕಾರಕ್ಕೆ ಶ್ಲಾಘನೀಯ ಎಂದರು.
ಹಬ್ಬ ಹರಿದಿನ ಜಾತ್ರೆಗಳಲ್ಲಿ ಸರ್ಕಾರ ಕೊರೊನಾ ನಿಯಮಗಳನ್ನು ಜಾರಿಗೆ ತರುತ್ತಿದ್ದು ಚುನಾವಣೆಗಳಲ್ಲಿ ಯಾಕೆ ನಿಯಮ ಪಾಲಿಸುತ್ತಿಲ್ಲ ಎನ್ನುವ ಜೆಡಿಎಸ್ ಮುಖಂಡ ನದಿಮುಲ್ಲಾರ ಪ್ರಶ್ನೆಗೆ ಮಸ್ಕಿ ಚುನಾವಣೆಯಲ್ಲಿ ಜನಜಂಗುಳಿ ಸೇರಿದ ಕಾರಣ ಕಾರ್ಯಕ್ರಮದ ಆಯೋಜಕರ ಮೇಲೆ ಈಗಾಗಲೇ ಹಲವಾರು ಪ್ರಕರಣಗಳನ್ನು ಪೋಲಿಸರು ದಾಖಲೆ ಮಾಡಿಕೊಂಡಿದ್ದಾರೆ. ನಿಮ್ಮ ಆರೋಗ್ಯದ ಸಲುವಾಗಿ ನಾವು ಹೇಳುತ್ತಿದ್ದು ದಯವಿಟ್ಟು ಸಹಕರಿಸಬೇಕು ನಿಯಮಗಳನ್ನು ಮೀರಿದರೆ ಅನಿವಾರ್ಯವಾಗಿ ಕಾನೂನು ಕ್ರಮಗಳನ್ನು ಜರುಗಿಸಬೇಕಾಗುತ್ತದೆಂದರು. ಗುಡಗುಂಟಾ ಅಮರೇಶ್ವರ ಜಾತ್ರೆಯನ್ನು ಸಹ ನಿಷೇದ ಮಾಡಲಾಗಿದ್ದು ನಗರದ ಯಮನೂರಪ್ಪ ಉರುಷನ್ನು ಸಹ ರದ್ದು ಪಡಿಸುವಂತೆ ತಹಶಿಲ್ದಾರರಿಗೆ ಮನವಿ ಮಾಡಲಾಗಿದೆಂದು ಡಿವಾಯ್‌ಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ತಿಳಿಸಿದರು.
ಸಿಪಿಐ ಶ್ರೀಕಾಂತ್, ನಗರ ಠಾಣೆಯ ಪಿಎಸ್‌ಐ ವಿಜಯ ಕೃಷ್ಣ, ಅಗ್ನಿ ಶಾಮಕ ಠಾಣೆಯ ಅಧಿಕಾರಿ ಗುರುರಾಜ, ನಗರ ಸಭೆಯ ಉಪಾಧ್ಯಕ್ಷರಾದ ಮುರ್ತುಜಾ ಹುಸೇನ್ ,ಸದಸ್ಯರಾದ ಜಿಲಾನಿಪಾಷಾ, ದಾಸರಿ ಸತ್ಯನಾರಾಯಣ, ವಿರೇಶ ಹಟ್ಟಿ, ಶರಣಪ್ಪ, ಪ್ರಶಾಂತ ಕಿಲ್ಲೆದ ವಿವಿಧ ಸಮಾಜ ಹಾಗೂ ಸಂಘಟನೆಗಳ ಮುಖಂಡರಾದ ಬಾಬರ್ ಪಾಷಾ ಜಾಹಗೀರದಾರ, ವೆಂಕೋಬ ಕಲ್ಲೂರು ,ದೇವೇಂದ್ರಗೌಡ, ಛತ್ರಪ್ಪ ,ಖಾಜಿ ಮಲ್ಲಿಖ್, ದೌಲಸಾಬ ದೊಡ್ಡಮನಿ, ಗದ್ದೆಪ್ಪ, ರಾಮಕೃಷ್ಣ ಭಜಂತ್ರಿ, ಗಂಗಣ್ಣ ಡಿಶ್ ಸೇರಿದಂತೆ ಇನ್ನಿತರರು ಶಾಂತಿ ಸಭೆಯಲ್ಲಿ ಬಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.