ಹೋಳಿ ದಿನ ರಕ್ತದೋಕುಳಿ

ಕಲಬುರಗಿ,ಮಾ.೩೦-ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯ ಎದರುಗಡೆ ಸೋಮವಾರ ಸಂಜೆ ನಡೆದಿದೆ. ಹೋಳಿ ಹಬ್ಬದ ದಿನವೇ ರಕ್ತದೋಕುಳಿ ಹರಿದಿದ್ದು, ಈ ಪ್ರಕರಣದಿಂದಾಗಿ ನಗರದ ಜನತೆ ಬೆಚ್ಚಿ ಬಿದ್ದಿದೆ.
ನಗರದ ಹಳೆ ಆರ್.ಟಿ.ಓ.ಕ್ರಾಸ್ ಏರಿಯಾ ನಿವಾಸಿ ವೀರತಾ ತಂದೆ ವಿಠ್ಠಲ ಉಪಾಧ್ಯ (೨೨) ಕೊಲೆಯಾದ ಯುವಕ. ಮೃತಪಟ್ಟ ವೀರತಾ ಹಾಗೂ ಲಾಲ್ಕಾ ಅಲಿಯಾಸ್ ಲಾಲೂಪ್ರಸಾದ್ ಎಂಬಾತನ ಮಧ್ಯೆ ಹಳೆ ವೈಷಮ್ಯವಿತ್ತು. ಜಿಮ್ಸ್ ಆಸ್ಪತ್ರೆಯ ಬಳಿ ಚಹಾ ಕುಡಿಯಲು ಲಾಲ್ಕಾ ಮತ್ತು ಆತನ ಸಂಗಡಿಗರು ಬಂದಿದ್ದ ವೇಳೆ ಅಲ್ಲಿಗೆ ಬಂದ ವೀರತಾನನ್ನು ಕಂಡು ಜಗಳಕ್ಕೆ ಮುಂದಾಗಿ ಬೈಕ್ ನಿಂದ ಆತನನ್ನು ಕೆಳಗೆ ಕೆಡವಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಯಾದ ಯುವಕನ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿ ಇಂದು ಬೆಳಿಗ್ಗೆ ಶವವನ್ನು ಅವರ ಕುಟುಂಬವರ್ಗದವರಿಗೆ ಹಸ್ತಾಂತರಿಸಲಾಗಿದೆ.
ಕಾರು, ಬೈಕ್ ಪುಡಿಪುಡಿ
ಈ ಕೊಲೆಗೆ ಸುಂದರ ನಗರದ ಯುವಕರೇ ಕಾರಣ ಎಂದು ಆರೋಪಿಸಿ ೨೦೦ ಹೆಚ್ಚು ಯುವಕರ ಉದ್ರಿಕ್ತ ಗುಂಪು ಕೈಯಲ್ಲಿ ತಲವಾರ್, ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ದುಂಡಾವರ್ತಿ ತೋರಿದ್ದು, ಮೂರು ಕಾರು, ಹತ್ತಾರು ಬೈಕ್ ಸ್ಕೂಟರ್ ಗಳನ್ನು ಪುಡಿ ಪುಡಿ ಮಾಡಿ ಪರಾರಿಯಾಗಿದೆ.
ಹೋಳಿ ನಿಮಿತ್ತ ಬಣ್ಣ ಆಡಿದ್ದ ಯುವಕರು ಪಾನಮತ್ತರಾಗಿದ್ದರು. ಈ ಸಂದರ್ಭದಲ್ಲಿ ಮಹಾದೇವಿ ಒಂಟಿ ಎಂಬ ವೃದ್ಧ ಮಹಿಳೆಯ ಮನೆ ಹೊಕ್ಕು ಕಟ್ಟಿಗೆಯಿಂದ ಹೊಡೆದು ಗಾಯ ಮಾಡಿದ್ದಾರೆ.
ಉದ್ರಿಕ್ತ ತಂಡದಿಂದ ತಪ್ಪಿಸಿಕೊಳ್ಳಲು ನಿವಾಸಿಗಳು ಮನೆಯ ಬಾಗಿಲು ಭದ್ರಪಡಿಸಿಕೊಂಡು ಕಾಟ್ ಕೆಳಗಡೆ ಅವಿತು ಕುಳಿತಿದ್ದರು.
ಹಲವು ಮನೆಗಳ ಗಾಜು ಒಡೆದಿದ್ದು, ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ೫೦ಕ್ಕೂ ಅಧಿಕ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸದ್ಯ ಪರಿಸ್ಥಿತಿ ಶಾಂತವಾಗಿದೆ.
ಐವರ ವಿರುದ್ಧ ಪ್ರಕರಣ
ನಗರದ ಜಿಮ್ಸ್ ಆಸ್ಪತ್ರೆಯ ಎದುರು ನಡೆದ ವೀರತಾ ಉಪಾಧ್ಯೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಾಲ್ಕಾ ಅಲಿಯಾಸ್ ಲಾಲೂಪ್ರಸಾದ್, ವಿಶಾಲ್ ನವರಂಗ್, ಸತೀಶಕುಮಾರ್ ಅಲಿಯಾಸ್ ಗುಂಡು ಫರಹತಾಬಾದ್, ಬಾಂಬೆ ಸಂಜಯ್ ಹಾಗೂ ತೌಸಿಫ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿ “ಬಿ”ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ಬ್ರಹ್ಮಪುರ, ಸ್ಟೇಷನ್ ಬಜಾರ್, ಆರ್.ಜಿ.ನಗರ ಪೊಲೀಸ್ ಇನ್ಸಪೆಕ್ಟರ್ ಗಳನ್ನೊಳಗೊಂಡ ತಂಡವನ್ನು ತನಿಖೆಗಾಗಿ ರಚಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್. ಸತೀಶಕುಮಾರ ತಿಳಿಸಿದ್ದಾರೆ.