ಹೋಳಿ ಆಚರಣೆ- ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಿರಲಿ: ಜಿಲ್ಲಾಧಿಕಾರಿ


ಬೆಳಗಾವಿ, ಮಾ.22: ಹೋಳಿ ಹಬ್ಬವಿರುವ ಸೋಮವಾರ(ಮಾ.25) ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಇರುತ್ತದೆ. ಆ ದಿನ ಪರೀಕ್ಷೆಗೆ ತೆರಳುವ ಮಕ್ಕಳಿಗೆ ಬಣ್ಣ ಎರಚುವುದು ಸೇರಿದಂತೆ ಯಾವುದೇ ರೀತಿಯ ಒತ್ತಾಯ ಮಾಡಬಾರದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು ಸಕಾಲದಲ್ಲಿ ಪರೀಕ್ಷಾ ಕೇಂದ್ರ ತಲುಪಬೇಕಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹೋಳಿ ಹಬ್ಬವನ್ನು ಆಚರಿಸಬೇಕು.
ಪರೀಕ್ಷೆಗೆ ತೆರಳುವ ಮಕ್ಕಳಿಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.