ಹೋಳಿಯ ಸಂಗಾತಿ ಹಲಗಿ

(ಸಿಕಂದರ ಎಂ. ಆರಿ)
ಗದಗ,ಮಾ4 : ಬಣ್ಣದೋಕುಳಿಯ ಹಬ್ಬವಾದ ಹೋಳಿಯ ಸಂಗಾತಿ ಹಲಗಿ ಅಥವಾ ತಮಟೆ. ಬಣ್ಣದಾಟಕ್ಕೆ ಹಲಗಿಯ ತಾಳ ಬೆರೆತಾಗಲೇ ಹೋಳಿಗೆ ನಿಜವಾದ ಕಳೆ ಬರುವುದು. ಹಾಗಾಗಿ, ರಂಗಿನಾಟದ ಪ್ರಮುಖ ಆಕರ್ಷಣೆ ಎಂದರೆ ಹಲಗಿಯೇ. ಬಣ್ಣದ ತಾಳಕ್ಕೆ ಮೈ ಮರೆತು ಮನುಷ್ಯ ಹೆಜ್ಜೆ ಹಾಕುವಂತೆ ಮಾಡುವ ಸಾಮರ್ಥ್ಯ ಹಲಗಿಗೆ ಇದೆ.
ಹಲಗಿ ಮತ್ತು ಮನುಷ್ಯನದು ತಾಳಾತ್ಮಕ ಮತ್ತು ಭಾವನಾತ್ಮಕ ಸಂಬಂಧ. ಮನುಷ್ಯನ ಹುಟ್ಟು, ಬದುಕಿನ ಸಂಭ್ರಮ ಹಾಗೂ ಸಾವಿನ ಮೆರವಣಿಗೆವರೆಗೂ ಅದು ಆತನ ಆಪ್ತ ಸಂಗಾತಿ. ಗ್ರಾಮ ದೇವರುಗಳ ಅಡ್ಡೆಯನ್ನು (ಪಲ್ಲಕ್ಕಿ) ಎತ್ತಿ ಕುಣಿಸಲು, ದೇವರನ್ನು ಹೊತ್ತ ತೇರು ಮುಂದಕ್ಕೆ ಸಾಗಲು ಅದರ ತಾಳಮೇಳ, ಸದ್ದುಸಪ್ಪಳ ಬೇಕೇ ಬೇಕು. ಇಲ್ಲದಿದ್ದರೆ, ಆ ಸಂಭ್ರಮವೇ ಅಪೂರ್ಣ.
ಆಧುನಿಕತೆಯ ಈ ಹೊತ್ತಿನಲ್ಲೂ ಉತ್ತರ ಕರ್ನಾಟಕದ ಹಲವೆಡೆ ಹಲಗಿ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಚೀಲ ಸೇರಿರುವ ಹಲಗಿಗಳು ಹೋಳಿ ಹಬ್ಬದಲ್ಲಿ ಹೊರ ಬರುತ್ತವೆ. ಇದೀಗ ಗದಗ ಜಿಲ್ಲೆಯಲ್ಲಿ ಹಬ್ಬದ ತಯಾರಿ ನಿಧಾನವಾಗಿ ರಂಗೇರುತ್ತಿದೆ. ಬಗೆಬಗೆಯ ಬಣ್ಣಗಳ ಜತೆಗೆ, ವಿವಿಧ ಆಕಾರದ ಮತ್ತು ಗಾತ್ರದ ಹಲಗಿಗಳ ಮಾರಾಟವೂ ಜೋರಾಗಿದೆ. ಗದಗ, ನರಗುಂದ, ಲಕ್ಷ್ಮೇಶ್ವರ, ರೋಣ, ಗಜೇಂದ್ರಗಡ, ನರೇಗಲ್ಲ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಲಗಿ ಖರೀದಿ ಭರಾಟೆಯೂ ಹೆಚ್ಚಾಗಿದೆ.
ಹೋಳಿ ಹುಣ್ಣಿಮೆಗೆ ಕೆಲವೇ ದಿನ ಬಾಕಿ ಇರುವುದರಿಂದ ಎಲ್ಲೆಲ್ಲೂ ಹಲಗಿ ಸದ್ದು ಮಾರ್ದನಿಸುತ್ತಿದೆ. ಆದರೆ, ಆಧುನಿಕತೆ ಪರಿಣಾಮದಿಂದ ಚರ್ಮದ ಹಲಗಿ ತನ್ನ ಚಾರ್ಮ್ ಕಳೆದುಕೊಂಡಿದ್ದು, ಅದರ ಜಾಗದಲ್ಲಿ ಪೈಬರ್, ಪ್ಲಾಸ್ಟಿಕ್ ತಮಟೆ ಸದ್ದು ಎಲ್ಲೆಡೆ ಕೇಳುತ್ತಿದೆ.
ರಂಗಿನಾಟದ ಹೋಳಿ ಹುಣ್ಣಿಮೆ ಪ್ರಮುಖ ಆಕರ್ಷಣೆಯೇ ಹಲಗಿ. ಶಿವರಾತ್ರಿ ಅಮವಾಸ್ಯೆ ಕಳೆಯುತ್ತಿದ್ದಂತೆಯೇ ಯುವಕರು, ಮಕ್ಕಳ ಕೈಯಲ್ಲಿ ಹಲಗಿ ಸಪ್ಪಳ ಜೋರಾಗಿದೆ. ಕಳೆದ ಒಂದು ವಾರದಿಂದ ನಗರ, ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಯುವಕರು ಹಲಗಿ ಬಾರಿಸಿ ಖುಷಿ ಪಡುತ್ತಿದ್ದಾರೆ. ಬಹು ಬೇಡಿಕೆ ಇದ್ದರೂ ಚರ್ಮದ ಹಲಗಿ ಸಪ್ಪಳ ಅಷ್ಟಕ್ಕಷ್ಟೇ ಎನ್ನುವಂತಾಗಿದೆ.
ಕೆಲ ಯುವಕರು ಹಲಗಿಯಲ್ಲಿ ಬಗೆ ಬಗೆಯ ಸ್ವರ ನುಡಿಸುವ ಮೂಲಕ ಸಂತಸಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಯುವಕರು ಲಯಬದ್ಧವಾಗಿ ಹಲಗೆ ನುಡಿಸಿದರೆ, ಚಿಕ್ಕ ಮಕ್ಕಳು ಹತ್ತಾರು ಬಗೆಯಲ್ಲಿ ಬಾರಿಸಿ ಖುಷಿ ಪಡುತ್ತಿದ್ದಾರೆ.
ತಾಳಬದ್ಧ ನಾದಕ್ಕೆ ನೃತ್ಯ: ನಗರದ ಪ್ರಮುಖ ವೃತ್ತಗಳಲ್ಲಿ ರಾತ್ರಿ ಸಮಯದಲ್ಲಿ ಹಲಗಿ ಬಾರಿಸಲು ಪಡ್ಡೆ ಹೈಕಳ ದೊಡ್ಡ ಗುಂಪೇ ಜಮಾಯಿಸುತ್ತದೆ. ಹತ್ತಾರು ಯುವಕರು ವೃತ್ತಾಕಾರದಲ್ಲಿ ನಿಂತು ಹಲಗಿ ಬಾರಿಸಲು ಆರಂಭಿಸಿದರೆ ಸ್ವರಕ್ಕೆ ತಕ್ಕಂತೆ ಮತ್ತಷ್ಟು ಯುವಕರು ವೃತ್ತದ ಮಧ್ಯದಲ್ಲಿ ನರ್ತಿಸಲು ಆರಂಭಿಸುತ್ತಾರೆ. ಹಲಗಿ ಬಾರಿಸುವ ಮತ್ತು ನರ್ತನದಲ್ಲಿ ತೊಡಗಿದವರನ್ನು ಹುರಿದುಂಬಿಸಲು ಇನ್ನಷ್ಟು ಯುವಕರು ಸಿಳ್ಳೆ-ಕೇಕೆ ಹಾಕುತ್ತಾ ಅಲ್ಲಿ ಜಮಾಯಿಸಿರುತ್ತಾರೆ. ಮೋಜು-ಮಸ್ತಿ ಅಲ್ಲಿ ಮೇಳೈಸಿರುತ್ತದೆ. ಕಾಮದಹನಕ್ಕೆ ಅಗತ್ಯ ಕುಳ್ಳು, ಕಟ್ಟಿಗೆ ಕದಿಯಲು ಸಹ ಅಲ್ಲಿ ರೂಪುರೇಷೆ ಸಿದ್ಧಗೊಳ್ಳುತ್ತದೆ.