
ಸಂಜೆವಾಣಿ ವಾರ್ತೆ
ಔರಾದ : ಸೆ.13:ರೈತರ ಸಂಭ್ರಮದ ಹೋಳಾ ಹಬ್ಬದ ಪ್ರಯುಕ್ತ ಪಟ್ಟಣದ ಮಾರುಕಟ್ಟೆಯಲ್ಲಿ ಎಲ್ಲೆಂದರಲ್ಲಿ ರೈತರು, ತಮ್ಮ ಜಾನುವಾರುಗಳಿಗೆ ಅಲಂಕರಿಸಲು ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು.
ತಾಲೂಕಿನ ಠಾಣಾ ಕುಶನೂರ, ಸಂತಪೂರ, ವಡಗಾಂವ, ಜಂಬಗಿ, ಚಿಂತಾಕಿ ಸೇರಿದಂತೆ ವಿವಿಧ ಗ್ರಾಮದ ಅಂಗಡಿಗಳಲ್ಲಿ ರೈತರು ತಮ್ಮ ಜಾನುವಾರುಗಳಿಗೆ ಅಲಂಕರಿಸಲು ಅಲಂಕಾರಿಕ ವಸ್ತುಗಳನ್ನ ಹಖರೀದಿ ಮಾಡುತ್ತಿದ್ದಾರೆ, ಹಬ್ಬದ ದಿನ ಎತ್ತುಗಳನ್ನು ಮೈತೊಳೆದು, ಮಿರಿಮಿರಿ ಮಿಂಚುವಂತೆ ಮಾಡುವ ರೈತರು, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಘಂಟೆ, ಹಣೆಪಟ್ಟಿ, ಬಲೂನು, ಟೇಪು, ರಿಬ್ಬನ್ನು ಬಣ್ಣದ ಪರಿಪರಿ ಮತ್ತಿತರ ಅಲಂಕಾರಿಕ ಸಾಮಗ್ರಿಗಳನ್ನು ಕಟ್ಟಿ, ಮೈಮೇಲೆ ಚಿತ್ರ ಬರೆದು, ರಂಗುರಂಗಿನ ಬಟ್ಟೆಯ ಹೊದಿಸಿ ಅಂದವಾಗಿ ಅಲಂಕರಿಸುತ್ತಾರೆ. ಜೊತೆಗೆ ತಮಗಾಗಿ ಮಾಡಿಕೊಂಡ ವಿವಿಧ, ರುಚಿಯಾದ ಸಿಹಿ ಭಕ್ಷ ಭೋಜ್ಯಗಳನ್ನು ಎತ್ತುಗಳಿಗೆ ಉಣಬಡಿಸಿ ಸಂಭ್ರಮಿಸುತ್ತಾರೆ. ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ, ರೈತರ ಸುಗ್ಗಿ ಸಂಭ್ರಮದ ಹಬ್ಬವಾದ ಹೋಳಾ ಹಬ್ಬದ ಪ್ರಯುಕ್ತ ರೈತರು ರಾಸುಗಳಿಗೆ ಮತಾಟೆ, ಕೊರಳು ಪಟ್ಟಿ ಸೇರಿದಂತೆ ಅಲಂಕಾರಿಕಗಳನ್ನು ಖರೀದಿಯಲ್ಲಿ ನಿರತರಾಗಿದ್ದಾರೆ.