
ಶಿವಮೊಗ್ಗ,ಜ.೧೬-ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಹಿನ್ನಲೆಯಲ್ಲಿ ಆಯೋಜಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಬ್ಬ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆ ವೇಳೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಹೋರಿ ತಿವಿದು ಇಬ್ಬರು ಮೃತಪಟ್ಟಿದ್ದಾರೆ.
ಜ.೧೪ ರಂದು ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ಬಳಿಯ ಮಾಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ರಂಗನಾಥ್(೨೪)ಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಇಂದು ಬೆಳಗ್ಗೆ ಯುವಕ ಮೃತಪಟ್ಟಿದ್ದಾನೆ. ಇನ್ನು ಮತ್ತೊಂದೆಡೆ ಕೊನಗನವಳ್ಳಿಯಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎದೆಗೆ ಹೋರಿ ತಿವಿದ ಪರಿಣಾಮ ಲೋಕೇಶ್ ( ೩೨) ಮೃತಪಟ್ಟಿದ್ದಾರೆ.
ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ಆಲ್ಕೊಳದ ನಿವಾಸಿಗೆ ಹೋರಿ ಎದೆಗೆ ತಿವಿದಿತ್ತು. ಆತ ಕೂಡಾ ಚಿಕಿತ್ಸೆ ಫಲಕಾರಿ ಆಗದೇ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ೬ ಜನರಿಗೆ ಗಾಯಗಳಾಗಿವೆ. ಮೃತ ಲೋಕೇಶ್ ರೈತಾಪಿ ವರ್ಗದವರಾಗಿದ್ದು, ಅವರಿಗೆ ಮೂರು ಮಕ್ಕಳಿದ್ದಾರೆ. ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೊನಗವಳ್ಳಿಯ ಹೋರಿ ಹಬ್ಬದ ಆಯೋಜಕರ ವಿರುದ್ಧ ದೂರು ದಾಖಲಾಗಿದೆ. ಕುಂಸಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.