ಹೋರಾಟ ಹತ್ತಿಕ್ಕಲು ಯತ್ನ ಅನುರಾಗ್ ವಿರುದ್ಧ ವಿನೇಶ್ ಆರೋಪ

ನವದೆಹಲಿ,ಮೇ.೩- ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ದ ಮಹಿಳಾ ಕುಸ್ತಿಪಟುಗಳು ಮಾಡಿದ ಲೈಂಗಿಕ ಕಿರುಕುಳದ ಗಂಭೀರ ವಿಷಯದ ಕುರಿತು ಯಾವುದೇ ಕ್ರಮಕೈಗೊಳ್ಳದೆ, ನಮ್ಮ ವಿಷಯವನ್ನೇ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಾಡಿದ್ದಾರೆ ಎಂದು ಕುಸ್ತಿಪಟು ವಿನೇಶ್ ಫೊಗಟ್ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ಕುಸ್ತಿಪಟುಗಳಿಗೆ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಕ್ರೀಡಾ ಸಚಿವರಿಗೆ ತಿಳಿಸಿದ್ದೆವು. ಆಗ ಅವರು ಇದಕ್ಕಾಗಿ ಸಮಿತಿ ರಚಿಸಿ ತಪ್ಪಿತಸ್ತರ ವಿರುದ್ದ ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿ ಆ ಬಳಿಕ ನಮ್ಮ ಹೋರಾಟವನ್ನೇ ಹತ್ತಿಕ್ಕುವ ಕೆಲಸ ಮಾಡಿದರು ಎಂದು ದೂರಿದ್ದಾರೆ.

ಸಚಿವರು ಹೇಳಿದ್ಧಾರೆ. ಸಮಸ್ಯೆ ಬಗೆಹರಿಸುತ್ತಾರೆ ಎಂದು ನಂಬಿ ಈ ಮೊದಲು ಪ್ರತಿಭಟನೆ ಹಿಂಪಡೆದಿದ್ದೆವು. ಕಿರುಕುಳದ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸುವ ಮೂಲಕ ವಿಷಯ ಹತ್ತಿಕ್ಕಲು ಪ್ರಯತ್ನಿಸಿದರು. ಅಲ್ಲದೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಅಧಿಕಾರ ಮತ್ತು ಸ್ಥಾನ ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಯ ವಿರುದ್ಧ ನಿಲ್ಲುವುದು ತುಂಬಾ ಕಷ್ಟ” ಎಂದು ಹೇಳಿದ್ದಾರೆ.

ಕುಸ್ತಿಪಟು ಬಜರಂಗ್ ಪೂನಿಯಾ ಅವರು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಲು ಪರಿಚಯಿಸಲಾದ ಹೊಸ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಆರೋಪಗಳನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ಬ್ರಿಜ್ ಭೂಷಣ್ ಅವರು ಒಲಿಂಪಿಕ್ಸ್‌ಗಾಗಿ ಕೆಲವು ನಿಯಮಗಳನ್ನು ಮಾಡಿದ್ದೇವೆ ಮತ್ತು ಆದ್ದರಿಂದ ಈ ಕ್ರೀಡಾಪಟುಗಳು ಪ್ರತಿಭಟಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ತಿಳಿದಿರಲಿ ಇದು ಒಲಿಂಪಿಕ್ಸ್ ಬಗ್ಗೆ ಅಲ್ಲ,ಲೈಂಗಿಕ ಕಿರುಕುಳದ ವಿರುದ್ಧವಾಗಿದೆ ಒಲಿಂಪಿಕ್ಸ್ ನಿಯಮದ ಬಗ್ಗೆ ಮಾತನಾಡಿದರೆ ಫೆಡರೇಶನ್ ಅವರು ಒಲಿಂಪಿಕ್ಸ್‌ನಿಂದ ಬರುವ ಕ್ರೀಡಾಪಟುಗಳ ಜಾಡು ಹಿಡಿಯುತ್ತಾರೆ ಎಂದು ತಿಳಿಸಿದ್ದಾರೆ.

ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಮತ್ತು ಶೋಷಣೆಯ ಆರೋಪದ ಮೇಲೆ ಡಬ್ಲ್ಯುಎಫ್‌ಐ ಅಧ್ಯಕ್ಷ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‍ಗಳನ್ನು ದಾಖಲಿಸಿದ್ದಾರೆ.

ನಮ್ಮ ಮನ್ ಕಿ ಬಾತ್ ಕೇಳಿ

“ನಮ್ಮ ಮನ್ ಕಿ ಬಾತ್ ಕೇಳಿ ಎಂದು ಕುಸ್ತಿಪಟು ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ನಮ್ಮ ಮಾತನ್ನು ಕೇಳುತ್ತಿಲ್ಲ, ಕ್ಯಾಂಡಲ್ ಮಾರ್ಚ್ ಮೂಲಕ ಅವರಿಗೆ ಬೆಳಕು ತೋರಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.