ಹೋರಾಟವು ಉನ್ನತ ಸಂಸ್ಕøತಿಗೆ ಜನ್ಮ ನೀಡುತ್ತದೆ: ಪ್ರತಿಭಾ ನಾಯಕ್

ಕಲಬುರಗಿ:ನ.29:”ಸಮಾಜವನ್ನು ಬದಲಾಯಿಸುವ ಹೋರಾಟಕ್ಕೆ ಕಾಲಿಡುವ ಯುವಜನರು ಮೊದಲು ತಮ್ಮನ್ನೇ ಬದಲಾಯಿಸಿಕೊಳ್ಳಬೇಕು, ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟಬೇಕು. ಆ ಹೋರಾಟಗಳ ಮೂಲಕವೇ ನಮ್ಮ ಚಾರಿತ್ರ್ಯ ಮೇಲೇರುತ್ತದೆ.” ಎಂದು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಪ್ರತಿಭಾ ನಾಯಕ್ ಅವರು ನುಡಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಕರ್ನಾಟಕ ರಾಜ್ಯ ಸಮಿತಿಯ ನೇತೃತ್ವದಲ್ಲಿ ಕಲಬುರಗಿ ನಗರದ ಶಮ್ಸ್ ಫಂಕ್ಷನ್ ಹಾಲ್‍ನಲ್ಲಿ ನಡೆಯುತ್ತಿರುವ 5ನೇ ರಾಜ್ಯ ಮಟ್ಟದ ಯುವಜನ ಸಮ್ಮೇಳನದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡುತ್ತಾ “ಇಂದು ನಮ್ಮ ಸಮಾಜದಲ್ಲಿ ಮೌಲ್ಯಗಳು ನಶಿಸುತ್ತಿವೆ. ಆದರೆ ನಾವು ಮೌಲ್ಯಗಳನ್ನು ಕಳೆದುಕೊಳ್ಳಬಾರದು. ಹೇಗೆ ಸುಗಂಧಯುಕ್ತ ಹೂವೊಂದು ತಾನಿರುವ ಸ್ಥಳವನ್ನು ಪರಿಮಳಯುಕ್ತಗೊಳಿಸುವುದೋ ಹಾಗೆಯೇ ಸಚ್ಚಾರಿತ್ರ್ಯವುಳ್ಳ ಯುವಕರಾಗಿ ನಾವು ನಮ್ಮ ಸಮಾಜದಲ್ಲಿಯೂ ಉನ್ನತ ಚಾರಿತ್ರ್ಯ ಮತ್ತು ಮೌಲ್ಯಗಳನ್ನು ಬೆಳೆಸಬೇಕು” ಎಂದು ಹೇಳಿದರು.

ಮುಂದುವರೆದು ಅವರು “ಕೋವಿಡ್‍ನ ಸಂದರ್ಭದಲ್ಲಿ ಸರ್ಕಾರವು ಸಾಕಷ್ಟು ಜನವಿರೋಧಿ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಉದ್ಯಮಗಳನ್ನು ಖಾಸಗಿ ಬಂಡವಾಳಿಗರಿಗೆ ಉಡುಗೊರೆಯಾಗಿ ನೀಡಿದೆ. ಪ್ರಪಂಚದಲ್ಲೇ ದೊಡ್ಡ ಪ್ರಜಾಪ್ರಭುತ್ವವೆಂದು ಬೀಗುವ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಹರಣವಾಗುತ್ತಿದೆ. ಅವುಗಳನ್ನು ರಕ್ಷಿಸಲು ನಾವು ಹೋರಾಟ ಬೆಳೆಸಬೇಕು” ಎಂದರು.

“ಇಂದು ದೇಶದಾದ್ಯಂತ ಯುವಜನರು ತಮ್ಮ ವಿರುದ್ಧ ಸರ್ಕಾರ ತರುವ ನೀತಿಗಳ ವಿರುದ್ಧ, ತಮ್ಮ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ನಾಯಕತ್ವಕ್ಕಾಗಿ ನಮ್ಮ ಸಂಘಟನೆಯತ್ತ ನೋಡುತ್ತಿದ್ದಾರೆ. ಅವರನ್ನು ಸಂಘಟಿಸಿ ಹೋರಾಟವನ್ನು ಒಂದು ಗಮ್ಯಕ್ಕೆ ಹೊಯ್ಯುವ ಹೊಣೆ ನಮ್ಮದು. ನಮಗಾಗಿ ಬದುಕುವುದಷ್ಟೇ ನಿಜವಾದ ಬದುಕಲ್ಲ, ಪರರಿಗಾಗಿ ಬದುಕುವವರು ನಿಜವಾದ ಮಾನವರು. ನಮ್ಮ ನಡುವೆ ಇರುವ ಯುವಕರಲ್ಲಿ ಅಂತಹ ಗುಣವುಳ್ಳ ಯುವಜನರಿದ್ದಾರೆ. ಅಂಥವರನ್ನು ಹುಡುಕಿ ಅವರಿಗೆ ವೈಚಾರಿಕತೆಯನ್ನು ನೀಡಿ ಯುವ ಸಂಘಟನಕಾರರಾಗಿ ಬೆಳೆಸುವ ಹೊಣೆಯನ್ನು ನೀವು ತೆಗೆದುಕೊಳ್ಳಬೇಕು” ಎಂದು ಅವರು ಪ್ರತಿನಿಧಿಗಳಿಗೆ ಕರೆ ನೀಡಿದರು.

ಈ ಪ್ರತಿನಿಧಿ ಅಧಿವೇಶನದಲ್ಲಿ ಸಮ್ಮೇಳನದ ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ವರದಿ ಮತ್ತು 2 ಉಪಗೊತ್ತುವಳಿಗಳನ್ನು ಮಂಡಿಸಿ, ಚರ್ಚಿಸಿ ಅಂಗೀಕರಿಸಲಾಯಿತು. ಇವುಗಳನ್ನು ಕುರಿತು ಸುಮಾರು 75 ಪ್ರತಿನಿಧಿಗಳು ಮಾತನಾಡಿ ತಮ್ಮ ಸಲಹೆ ನೀಡಿದರು. ಅನಂತರ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟ ಎಐಡಿವೈಓನ ಮಾತೃ ಪಕ್ಷ ಎಸ್‍ಯುಸಿಐ ಕಮ್ಯುನಿಸ್ಟ್‍ನ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಎಚ್.ವಿ.ದಿವಾಕರ್ ಅವರಿಗೆ ಕೆಂಪು ವಸ್ತ್ರದೊಂದಿಗೆ ಗೌರವ ಸಲ್ಲಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು “ಈ ಯುವಜನ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಹಕರಿಸಿದ ಜಿಲ್ಲೆಯ ಸಮಸ್ತ ಜನತೆಗೆ ಮತ್ತು ಕಾರ್ಯಭಾರಗಳನ್ನು ನಿರ್ವಹಿಸಿದ ಪಕ್ಷದ ಕಾರ್ಯಕರ್ತರಿಗೆ ಈ ಗೌರವ ಸಲ್ಲಬೇಕು. ಈ ಸಮ್ಮೇಳನದಲ್ಲಿ ರಚನೆಯಾಗಿರುವ ಹೊಸ ನಾಯಕತ್ವವು ರಾಜ್ಯದಾದ್ಯಂತ ಯುವಜನ ಚಳುವಳಿಯನ್ನು ಹೊಸ ಹುರುಪಿನೊಂದಿಗೆ ಬೆಳಸಲಿ” ಎಂದÀು ಆಶಿಸಿದರು.

ಸಂದರ್ಭದಲ್ಲಿ ಹೊಸ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ರಾಜ್ಯ ಮಿತಿಯ ವಿವರ ಇಂತಿದೆ. ಅಧ್ಯಕ್ಷರಾಗಿ ಶರಣಪ್ಪ ಉದ್ಬಾಳ್, ಉಪಾಧ್ಯಕ್ಷರುಗಳಾಗಿ ಚನ್ನಬಸವ ಜಾನೇಕಲ್-ರಾಯಚೂರು, ವಿಜಯಕುಮಾರ್ -ಚಿತ್ರದುರ್ಗ, ಕೃಷ್ಣ -ಬೆಂಗಳೂರು, ಜಗನ್ನಾಥ ಎಸ್.ಎಚ್ -ಕಲಬುರಗಿ, ವಿನಯ ಸಾರಥಿ- ಬೆಂಗಳೂರು ಕಾರ್ಯದರ್ಶಿಗಳಾಗಿ ಸಿದ್ದಲಿಂಗ ಬಾಗೇವಾಡಿ, ಕಛೇರಿ ಕಾರ್ಯದರ್ಶಿ & ಖಜಾಂಚಿಯಾಗಿ ಜಯಣ್ಣ ಬೆಂಗಳೂರು ಆಯ್ಕೆಯಾದರು. ಸೆಕ್ರಟೆಯಟ್ ಸದಸ್ಯರುಗಳಾಗಿ ಭವನಿಶಂಕರಗೌಡ ಧಾರವಾಡ, ಶ್ರೀಕಾಂತ ಕೊಂಡಗೂಳಿ ಬಿಜಾಪುರ, ಶರಣು ಗಡ್ಡಿ ಕೊಪ್ಪಳ, ಸುನೀಲ್ ಮೈಸೂರು, ಸುಮಾ ಮೈಸೂರು, ಜಗದೀಶ್ ನೇಮಕಲ್ ಬಳ್ಳಾರಿ, ಅಂಬಿಕಾ ಕಲಬುರಗಿ ಇವರ ಜೊತೆಯಲ್ಲಿ 29 ಸದಸ್ಯರ ಕಾರ್ಯಕಾರಿ ಸಮಿತಿ ಹಾಗೂ 20 ಜನ ಕೌನ್ಸಿಲ್ ಸದಸ್ಯರು ಸೇರಿದಂತೆ 64 ಸದಸ್ಯ ಬಲದ ಬಲಿಷ್ಠ ಸಮತಿಯನ್ನು ಆಯ್ಕೆ ಮಾಡಲಾಯಿತು.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೂರಾರು ಪ್ರತಿನಿಧಿಗಳು ಹಾಗೂ ಕಲಬುರಗಿಯ ನೂರಾರು ಯುವಜನರು ಈ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಭಾಗವಹಿಸಿದ್ದರು.