ಕಲಬುರಗಿ,ಮೇ.28 ಹೋರಾಟ ನಿರತ ಕುಸ್ತಿಪಟುಗಳಿಗೆ ಬೆಂಬಲವಾಗಿ ನಿಂತ ಮಹಿಳಾ ಮತ್ತು ರೈತ ಸಂಘಟನೆಗಳ ನಾಯಕರ ಬಂಧನವು ಖಂಡನಾರ್ಹವಾಗಿದೆ ಎಂದು ಆಲ್ ಇಂಡಿಯಾ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಗಣಪತರಾವ್ ಕೆ. ಮಾನೆ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ಅವರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ದೇಶದ ಹೆಸರಾಂತ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶಾ ಪೋಗಟ್, ಬಜರಂಗ್ ಪೂನಿಯಾ ಹಾಗೂ ಇತರರು ಭಾರತೀಯ ಕುಸ್ತಿಪಟುಗಳ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಹಾಗೂ ತರಬೇತಿದಾರರಿಂದ ನಡೆದ ಲೈಂಗಿಕ ಕಿರುಕುಳದ ವಿರುದ್ಧ ಹಾಗೂ ಆತನ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಆ ಪ್ರತಿಭಟನೆಗೆ ದೇಶದ ಹಲವಾರು ಚಿಂತಕರು, ಹೋರಾಟಗಾರರು, ಸಂಘಟನೆಗಳು ಹಾಗೂ ಜನತೆ ಬೆಂಬಲಿಸಿದ್ದಾರೆ. ಆದಾಗ್ಯೂ, ಸರ್ಕಾರ ಆತನಿಗೆ ಬಂಧಿಸಲು ಇನ್ನೂ ಮುಂದಾಗಿಲ್ಲ ಎಂದು ಅವರು ಜಂಟಿ ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟಕ್ಕೆ ಬೆಂಬಲವಾಗಿ ಶನಿವಾರ ದೆಹಲಿಯಲ್ಲಿ ಹೋರಾಟಗಾರರು ಮಹಿಳಾ ಮಹಾ ಪಂಚಾಯಿತಿ ಕರೆದಿದ್ದರು. ಆದಾಗ್ಯೂ, ಬೆಳಿಗ್ಗೆ ದೆಹಲಿ ಪೋಲಿಸರು ಆ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಎಐಎಂಎಸ್‍ಎಸ್ ಮಹಿಳಾ ಸಂಘಟನೆಯ ದೆಹಲಿ ರಾಜ್ಯ ಕಾರ್ಯದರ್ಶಿ ಕಾ. ರಿತು ಕೌಶಿಕ್, ಎಸ್‍ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ಹರಿಯಾಣ ರಾಜ್ಯ ಸಮಿತಿಯ ಪ್ರಮುಖ ಸದಸ್ಯ ರಾಜೇಂದರಸಿಂಗ್ ಅವರಿಗೆ ವಶಪಡಿಸಿಕೊಂಡಿದ್ದಾರೆ. ಎಐಕೆಕೆಎಂಎಸ್ ರೈತ ಸಂಘಟನೆಯ ಹರಿಯಾಣಾ ರಾಜ್ಯ ಕಾರ್ಯದರ್ಶಿ ಕಾ. ಜೈಕರನ್ ಮಂಡೋತಿ ಅವರ ಮನೆಗೆ ಪೋಲಿಸರು ಮುತ್ತಿಗೆ ಹಾಕಿದ್ದಾರೆ. ಪೋಲಿಸರ ಎಲ್ಲ ದಮನಕಾರಿ ಕ್ರಮಗಳು ಸಂಸತ್ತಿನ ಮುಂದೆ ಮಹಾ ಪಂಚಾಯಿತಿಯನ್ನು ವಿಫಲಗೊಳಿಸುವುದೇ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಲೈಂಗಿಕ ಕಿರುಕುಳ ನೀಡಿರುವ ಆರೋಪಿಯನ್ನು ಬಂಧಿಸುವುದನ್ನು ಬಿಟ್ಟು, ನ್ಯಾಯಯುತ ಹೋರಾಟ ಮಾಡುತ್ತಿರುವವರನ್ನು ಬಂಧಿಸಿರುವ ಕ್ರಮವು ಅತ್ಯಂತ ಖಂಡನಾರ್ಹ. ಆರೋಪಿಯಾಗಿರುವ ಬಿಜೆಪಿ ಸಂಸದನಿಗೆ ರಕ್ಷಿಸುವ ಕ್ರಮವಾಗಿದೆ. ನ್ಯಾಯಕ್ಕಾಗಿ ನಡೆಯುವ ಹೋರಾಟಗಳನ್ನು ಈ ರೀತಿ ಅಪ್ರಜಾತಾಂತ್ರಿಕವಾಗಿ ಸದೆಬಡೆಯಲಾಗುತ್ತಿದೆ. ಆದ್ದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಂತಹ ದಮನಕಾರಿ ಪ್ರವೃತ್ತಿಯನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು, ರೈತರು ಹಿಂದೆ ದೆಹಲಿಯಲ್ಲಿ ನಡೆಸಿದ ಮಹಾನ್ ಐತಿಹಾಸಿಕ ಹೋರಾಟಗಳನ್ನು ಸರ್ಕಾರಕ್ಕೆ ನೆನಪಿಸುತ್ತದೆ. ದಬ್ಬಾಳಿಕೆಯನ್ನು ಹೀಗೆಯೇ ಮುಂದುವರೆಸಿದರೆ ರೈತರು ಮತ್ತೊಮ್ಮೆ ಮಹಾನ್ ಸಂಗ್ರಾಮಕ್ಕೆ ಧುಮುಕುತ್ತಾರೆ ಎಂದು ಎಚ್ಚರಿಸಿದ್ದಾರೆ. ಜನತೆ ಆಳ್ವಿಕರ ಇಂತಹ ಕೃತ್ಯಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.