ಹೋರಾಟದ ನೆನಪು: ಕಣ್ಣೀರು ಹಾಕಿದ ಅನ್ನದಾನಿ

ಚಿತ್ತಾಪುರ:ನ.7: ಮಾರುತಿ ಮಾನ್ಪಡೆ ಅವರ ಜೊತೆಗಿನ ಹೋರಾಟ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅಧಿಕಾರಿಗಳನ್ನು ನಡುಕ ಹುಟ್ಟಿಸುವ ಅವರ ಕ್ರಾಂತಿಕಾರಿ ಮಾತುಗಳು, ಅವರ ಸರಳತೆ, ಪ್ರೀತಿ, ವಿಶ್ವಾಸವನ್ನು ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಣ್ಣೀರು ಹಾಕಿದ ದೇವಮ್ಮ ಅನ್ನದಾನಿ.

ಪಟ್ಟಣದ ಅಂಬಿಗರ ಚೌಡಯ್ಯ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಸಿಐಯುಟಿ ಹಮ್ಮಿಕೊಂಡಿದ್ದ ದಿ,ಕಾಂ ಮಾರುತಿ ಮಾನ್ಪಡೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಮೌನಾಚರಣೆ ಮಾಡುವುದರೊಂದಿಗೆ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿ, ಕಲ್ಯಾಣ ಕರ್ನಾಟಕ ಪ್ರದೇಶದ ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರಗಳಲ್ಲಿನ ರೈತರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಸ್ಥಳೀಯ ರೈತರ ಮೇಲೆ ನೇರವಾಗಿ ಪರಿಣಾಮ ಬೀರುವ ಸರ್ಕಾರದ ಆಮದು ನೀತಿಗಳನ್ನು ಅವರು ಯಾವಾಗಲೂ ಟೀಕಿಸುತ್ತಿದ್ದರು. ಅಷ್ಟೇ ಅಲ್ಲದೆ ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ದುಡಿಯುವ ಜನಸಾಮಾನ್ಯರ ಶೋಷಣೆ ಮತ್ತು ದಬ್ಬಾಳಿಕೆ ವಿರುದ್ಧ ರಾಜಿಯಾಗದೇ ಹೋರಾಟಗಳನ್ನು ನಡೆಸಿಕೊಂಡು ಹೋಗುತ್ತಿದ್ದರು ಎಂದರು.

ಈ ಸಂದರ್ಭದಲ್ಲಿ ರಾಜಶ್ರೀ ಕಂಪನಿಯ ಲಿಡರ್ ಆದ ಅಸ್ಪಕ್, ಅಯ್ಯಪ್ಪ, ರೈತ ಮುಖಂಡರಾದ ನಾಗೇಂದ್ರಪ್ಪ ಡಿಗ್ಗಿ, ಭೀಮರಾವ್ ಮೊಗಲಾ, ಅಂಗನವಾಡಿ ಕಾರ್ಯಕರ್ತರಾದ ಅಕ್ಕಮಹಾದೇವಿ, ಶಾಂತ, ಸೇರಿದಂತೆ ಇತರರಿದ್ದರು.