ಹೋರಾಟಗಾರ ಪಟ್ಟೇದಾರ ಬದುಕನ್ನೇ ನುಂಗಿದ ಕೋವಿಡ್ ಮಹಾಮಾರಿ

ಕಲಬುರಗಿ, ಮೇ 4 :ಕಳೆದ ನಾಲ್ಕು ದಶಕಗಳಿಗಿಂತಲೂ ಗಟ್ಟಿ ಹೋರಾಟವನ್ನು ಮಾಡಿಕೊಂಡು ಬಂದಿದ್ದ ಶೋಷಿತರ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತ್ ಪಟ್ಟೇದಾರ್ ಅವರು ಮಹಾಮಾರಿ ಕೋವಿಡ್ ಮಹಾಮಾರಿಗೆ ಒಳಗಾಗಿ ಅಸುನೀಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯೇ ಗುರುಶಾಂತ್ ಪಟ್ಟೇದಾರ್ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಅದರಿಂದಾಗಿ ಬಸವೇಶ್ವರ್ ಆಸ್ಪತ್ರೆಗೆ ಸೇರಿದ್ದರು. ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಅವರು ಅಸುನೀಗಿದರು.
ಮೃತರು ಪತ್ನಿ ಹಾಗೂ ಪಾಲಿಕೆ ಸದಸ್ಯ ಸಿದ್ದಾರ್ಥ ಮತ್ತು ಇಂಗ್ಲೆಂಡಿನಲ್ಲಿರುವ ಇನ್ನೋರ್ವ ಪುತ್ರ ಸೇರಿದಂತೆ ಅಪಾರ ಬಂಧು, ಬಳಗ ಹಾಗೂ ಶೋಷಿತರೂ ಸೇರಿದಂತೆ ಅಪಾರ ಕಾರ್ಯಕರ್ತರನ್ನು ಬಿಟ್ಟು ಅಗಲಿದ್ದಾರೆ.
ಗುರುಶಾಂತ್ ಪಟ್ಟೇದಾರ್ ಅವರು ರಾಜಕೀಯ ನಾಯಕರಾಗಿದ್ದರು. ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಅನೇಕ ಪಕ್ಷಗಳಲ್ಲಿ ಅವರು ಕಾರ್ಯನಿರ್ವಹಿಸಿದರು. ಜಾತ್ಯಾತೀತ ಜನತಾದಳದ ನಂತರ ಓವೈಸಿ ಪಕ್ಷವನ್ನು ಸೇರಿದ್ದರು. ಪೌರತ್ವ ಕಾಯ್ದೆ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ್ ಪರ ಜಯಘೋಷ ಹಾಕಿದ ಪ್ರಕರಣದಲ್ಲಿಯೂ ಸಹ ಪಟ್ಟೇದಾರ್ ಅವರು ವಿಚಾರಣೆಯನ್ನು ಎದುರಿಸಿದ್ದರು.
ಅಫಜಲಪುರ ಕ್ಷೇತ್ರದಲ್ಲಿ ಶಾಸಕ ಎಂ.ವೈ. ಪಾಟೀಲ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಮಾಜಿ ಮುಖ್ಯ ಸಚೇತಕ ದಿ. ವಿಠಲ್ ಹೇರೂರ್, ಮಾಜಿ ಶಾಸಕ ಹಣಮಂತರಾವ್ ದೇಸಾಯಿ ಮುಂತಾದವರ ಪ್ರಬಲ ನಾಯಕರ ನಡುವೆಯೂ ಸಹ ಘಟ್ಟಿ ಧ್ವನಿ ಹಾಗೂ ಹೋರಾಟದ ಮೂಲಕ ಪಟ್ಟೇದಾರ್ ಅವರು ಮನೆಮಾತಾಗಿದ್ದರು.
ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂಬ ಆಗಿನ ಕೇಂದ್ರ ಸಚಿವ ಅನಂತಕುಮಾರ್ ಹೆಗೆಡ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ ಒಂದು ಕೋಟಿ ರೂ.ಗಳ ಬಹುಮಾನ ಕೊಡುವುದಾಗಿಯೂ ವಿವಾದಾತ್ಮಕ ಹೇಳಿಕೆಯನ್ನೂ ಸಹ ಪಟ್ಟೇದಾರ್ ನೀಡಿದ್ದರು.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅತಿರಥ, ಮಹಾರಥರ ವಿರುದ್ಧ ಅಗತ್ಯ ಬಿದ್ದಾಗ ನಿರ್ದಾಕ್ಷಿಣ್ಯವಾಗಿ ಆರೋಪಗಳನ್ನು ಮಾಡುತ್ತಿದ್ದ ಪಟ್ಟೇದಾರ್ ಅವರು, ರಾಜಕೀಯ ಮೀಸಲಾತಿಯನ್ನು ಕೇವಲ ಕುಟುಂಬಕ್ಕೆ ಸೀಮಿತವಾಗಿದ್ದಕ್ಕೆ ಬಲವಾಗಿ ಆಕ್ಷೇಪಿಸುತ್ತಿದ್ದರು. ಮೇಲ್ವರ್ಗದವರಿಗೆ ಮೀಸಲಾತಿ ಕಲ್ಪಿಸಿದ್ದ ಕೇಂದ್ರ ಸರ್ಕಾರದ ಕ್ರಮಗಳನ್ನು ವಿರೋಧಿಸಿದ್ದ ಪಟ್ಟೇದಾರ್ ಅವರು, ಮೀಸಲಾತಿ ಸೌಲಭ್ಯವನ್ನೇ ತೆಗೆದುಹಾಕುವಂತೆ ಗುಡುಗಿದ್ದರು.
ಇತ್ತೀಚೆಗೆ ಅಂಬೇಡ್ಕರ್ ಜಯಂತಿ ಹೆಸರಿನ ಮೇಲೆ ಹಿರಿಯ ಮುಖಂಡ ಡಾ. ವಿಠಲ್ ದೊಡ್ಡಮನಿ ಅವರು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಸಹ ಪಟ್ಟೇದಾರ್ ಅವರು ಮಾಡಿದ್ದರು. ಗುರುಶಾಂತ್ ಪಟ್ಟೇದಾರ್ ಅವರ ನಿಧನಕ್ಕೆ ವಿವಿಧ ಸಮುದಾಯಗಳ ಗಣ್ಯ, ಮಾನ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಸಂಜೆ ನೆರವೇರಿತು ಎಂದು ಮೂಲಗಳು ಹೇಳಿವೆ.