ಹೋರಾಟಗಾರ ಜಿಮ್ಮಿ ಗೆ ಜೈಲುಸಜೆ

ಹಾಂಕಾಂಗ್, ಎ.೧೭- ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಹಿರಿಯ ಹೋರಾಟಗಾರ ಜಿಮ್ಮಿ ಲಾಯ್ (೭೩)ಗೆ ೧೪ ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ೨೦೧೯ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಪ್ರತಿಭಟನೆ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಲಾಯ್ ಸೇರಿದಂತೆ ಹಲವರನ್ನು ದೋಷಿ ಎಂದು ಘೋಷಿಸಲಾಗಿದೆ.
ಆಪಲ್ ಡೈಲಿ ಟ್ಯಾಬ್ಲಾಯ್ಡ್‌ನ ಸಂಸ್ಥಾಪಕರಾಗಿರುವ ಲಾಯ್, ಚೀನಾದ ಸರ್ವಾಧಿಕಾರವನ್ನು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದ್ದು, ಹಲವು ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿ, ಕಮ್ಯುನಿಸ್ಟ್ ರಾಷ್ಟ್ರದ ವಿರುದ್ಧ ರಣಕಹಳೆ ಊದಿದ್ದರು. ಸದ್ಯ ಹಾಂಕಾಂಗ್‌ನಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪ್ರತಿಭಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ಚೀನಾ, ಇದರ ಭಾಗವಾಗಿಯೇ ಲಾಯ್‌ಗೆ ೧೪ ತಿಂಗಳ ಜೈಲುಸಜೆ ವಿಧಿಸಿದೆ. ಚೀನಾ ಇತ್ತೀಚಿಗೆ ಬಳಕೆಗೆ ತಂದ ರಾಷ್ಟ್ರೀಯ ಭದ್ರತಾ ಕಾನೂನಿನನ್ವಯ ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಟ ನಡೆಸುವ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.