ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ:ಜಿಲ್ಲಾಧಿಕಾರಿ ಟಿ.ಭೂಬಾಲನ್

ವಿಜಯಪುರ: ಆ.16: ದೇಶಕ್ಕೆ ಸ್ವಾತಂತ್ರ್ಯ ಹಲವಾರು ದೇಶಪ್ರೇಮಿಗಳ, ಹೋರಾಟಗಾರರ ತ್ಯಾಗ ಬಲಿದಾನದಿಂದ ಲಭಿಸಿದೆ. ನಮ್ಮ ಉತ್ತಮ ಸಂಸ್ಕøತಿಯನ್ನು ನಾವು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಾಗಿದೆ. ದೇಶಕ್ಕಾಗಿ ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಎಂದಿಗೂ ಮರೆಯಬಾರದು. ದೇಶದ ಘನತೆ, ಐಕ್ಯತೆ ಹಾಗೂ ಒಗ್ಗಟ್ಟಿಗಾಗಿ ನಾವು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕರೆ ನೀಡಿದರು.
ಅವರು ಸೋಮವಾರ ವಿಜಯಪುರ ಮಹಾನಗರಪಾಲಿಕೆ ವ್ಯಾಪ್ತಿಯ ಬೇಗಂ ತಲಾಬ ಪ್ರದೇಶದಲ್ಲಿ ಸರ್ಕಾರದ ನಿರ್ದೇಶನದಂತೆ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಂಗವಾಗಿ ಮಹಾನಗರ ಪಾಲಿಕೆಯಿಂದ ಆಯೋಜಿಸಿರುವ ಶಿಲಾ ಫಲಕ ಸಮರ್ಪಣೆ, ವಸುದಾವಂದನ, ವೀರ ಯೋಧರಿಗೆ ಗೌರವ ಸಮರ್ಪಣೆ, ಪಂಚಪ್ರಾಣ ಶಪಥ ಬೊಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾನಗರಪಾಲಿಕೆಯ ಆಯುಕ್ತರಾದ ಬಿ.ಎ.ಸೌದಾಗರ ಅವರು ಮಾತನಾಡಿ, ರಾಷ್ಟ್ರಪ್ರೇಮ ಹಾಗೂ ಸ್ವಾಭಿಮಾನದ ಪ್ರತಿಕ ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಮಹಾನಗರಪಾಲಿಕೆಯು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರು ಸ್ಮರಣೆಗಾಗಿ ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ. ಈ ದಿಸೆಯಲ್ಲಿ ಸರ್ಕಾರದ ನಿರ್ದೇಶನದಂತೆ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನನ್ನ ಗಿಡ ನನ್ನ ಭೂಮಿ ಸಂಸ್ಥೆಯ ಸಂಚಾಲಕರಾದ ಬೈಚಬಾಳ ಮಾತನಾಡುತ್ತಾ ದೇಶ ಸೇವೆಯೇ ಈಶ ಸೇವೆ ಯಾವುದೇ ನಿಟ್ಟಿನಲ್ಲಿ ನಾವು ದೇಶಕ್ಕೆ ಒಳ್ಳೆಯದನ್ನು ಮಾಡಿದರೆ ಅದು ದೇಶ ಸೇವೆ ಆಗುತ್ತದೆ. ತಂಡದ ಸದಸ್ಯರು ಪರಿಸರ ಸಂರಕ್ಷಣೆ ಆಶಯ ಹೊಂದಿ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರ ಪ್ರೋತ್ಸಾಹ ದೊರೆಯುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥವಾಗಿ ಸರ್ಕಾರದಿಂದ ನಿಗದಿತ ನಮೂನೆ ಶಿಲಾ ಫಲಕಗಳನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸ್ಥಾಪಿಸಿ, ಸಮರ್ಪಿಸಿದರು. ವಸುದಾವಂದನ ಕಾರ್ಯಕ್ರಮದಡಿ ವೈದ್ಯಕೀಯ ಗುಣಗಳುಳ್ಳ 75 ಸಸಿಗಳನ್ನು ಬೇಗಂ ತಲಾಬ್ ಕೆರೆಯ ಪ್ರದೇಶದಲ್ಲಿ ನೆಟ್ಟು ಅಮೃತವಾಟಿಕಾ ಅಭಿವೃದ್ಧಿಗೊಳಿಸಿ ಹಸರೀಕರಣ ಕಾರ್ಯದೊಂದಿಗೆ ಮಾತೃಭೂಮಿಗೆ ಗೌರವ ಸಲ್ಲಿಸಲಾಯಿತು. ಔಷಧಿಗುಣಗುಳುಳ್ಳ ಸಸಿಗಳನ್ನು ನೆಟ್ಟು ಆರೈಕೆ ಮಾಡಲು ದತ್ತು ನೀಡಿ ನಾಮಕರಣ ಫಲಕ ಅಳವಡಿಸಲಾಯಿತು.
ತದನಂತರ ಮಾತೃ ಭೂಮಿಯ ಘನತೆ ಹಾಗೂ ಸ್ವಾತಂತ್ಯ್ರ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಮರ್ಪಿಸಲು ಶಪಥ ವಿಧಿಯನ್ನು ಮಹಾನಗರಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಬೋಧಿಸಿದರು.
ವೀರ ಯೋಧರಾದ ಶಂಕ್ರೆಪ್ಪ ಹಾರವಾಳ, ಮಲ್ಲಿಕಾರ್ಜುನ ಬಾಗೇವಾಡಿ, ಸಿದ್ಧಲಿಂಗ ಮರನೂರ, ಸಂಜೀವ ನ್ಯಾಮಗೊಂಡ, ಚಂದ್ರಕಾಂತ ಇಂಗಳೇಶ್ವರ ಇವರುಗಳಿಗೆ ಜಿಲ್ಲಾಧಿಕಾರಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ವಲಯ ಆಯುಕ್ತರಾದ ಆರ್.ಪಿ.ಜಾಧವ, ಪರಿಸರ ಅಭಿಯಂತರರಾದ ಅಶೋಕಕುಮಾರ ಸಜ್ಜನ, ನಗರ ಯೋಜನಾಧಿಕಾರಿಗಳಾದ ಎಲ್.ಎಸ್.ಮೋರೆ, ಕಂದಾಯ ಅಧಿಕಾರಿಗಳಾದ ರವೀಂದ್ರ ಶಿರಶ್ಯಾಡ, ಕಾರ್ಯಪಾಲಕ ಅಭಿಯಂತರಾರದ ಪಡಗಾನೂರ ಡೊಳ್ಳಿ ಸಹಾಯಕ ಕಾರ್ಯಪಾಲಕ ಅಭಿಯಂತರಾರದ ಸಂಜೀವ ಕೊಟ್ಟೆಣ್ಣವರ, ಶರಣಪ್ಪ, ವಿದ್ಯಾಧರ ನ್ಯಾಮಗೌಡ, ಅಭಿಯಂತರರಾದ ಶೇಖರ ಮಾಳಿ, ಅನೀಲ, ಪ್ರತೀಕ, ಸಂಜಯ ಗಾಂಧಿ, ತೋಟಗಾರಿಕೆ ನಿರೀಕ್ಷಕರಾದ ಎಸ್.ಎಮ್.ಪತ್ತಾರ ಉಪಸ್ಥಿತರಿದ್ದರು.