ಹೋರಾಟಗಾರರ ಆಕ್ಷೇಪ: ಕಾವೇರಿಗೆ ಜೈ ಎಂದ ತಾರಾ ನಟರು

ಬೆಂಗಳೂರು,ಸೆ.20- ಕಾವೇರಿ ವಿಚಾರದಲ್ಲಿ ಕನ್ನಡದ ನಟರು ಧ್ವನಿ ಎತ್ತುತ್ತಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ನಟರಾದ ಸುದೀಪ್ ಹಾಗು ದರ್ಶನ್  ಕಾವೇರಿ ಪರವಾಗಿ ಜೈ ಅಂದಿದ್ದಾರೆ.

ಈ ಕುರಿತಂತೆ ಇಬ್ಬರು ನಟರು ಟ್ವೀಟ್ ಮಾಡಿ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನ್ಯಾಯ ಸಿಗಲಿ : ದರ್ಶನ್

ನಟ ದರ್ಶನ್ ಟ್ವೀಟ್ ನಲ್ಲಿ ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ ಎಂದಿದ್ದಾರೆ.

ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದಿದ್ದಾರೆ

ಕಾವೇರಿ ನಮ್ಮ ಹಕ್ಕು : ಸುದೀಪ್

ನಟ ಸುದೀಪ್ ಸುದೀಪ್ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು  ನಾನು ನಂಬಿದ್ದೇನೆ  ಎಂದಿದ್ದಾರೆ.

ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ.
ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ ಎಂದು ಆಗ್ರಹಿಸಿದ್ದಾರೆ.