ಹೋರಾಟಕ್ಕೆ ಸಿದ್ದರಾಗಿರಿ : ಪ್ರಸನ್ನಾನಂದ ಸ್ವಾಮಿ

ಚಿತ್ರದುರ್ಗ 25 : ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿದ್ದಾರೆ. ಕಾದು ನೋಡೋಣ ಇಲ್ಲವಾದಲ್ಲಿ ಹೋರಾಟಕ್ಕೆ ಸಿದ್ದರಾಗಿರಿ ಎಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ನಾಯಕ ಜನಾಂಗಕ್ಕೆ ಕರೆ ನೀಡಿದರು.
ಫೆ.8 ಮತ್ತು 9 ರಂದು ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯುವ ಮೂರನೇ ವರ್ಷದ ವಾಲ್ಮೀಕಿ ಜಾತ್ರೆ, ಮೀಸಲಾತಿ ಜನಜಾಗೃತಿ, ಶ್ರೀಮಠದ 23 ನೇ ವಾರ್ಷಿಕೋತ್ಸವ, ಲಿಂಗೈಕ್ಯ ಜಗದ್ಗುರು ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 14 ನೇ ವರ್ಷದ ಪುಣ್ಯಾರಾಧನೆ, 13 ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಮಹಾರಾಣಿ ಕಾಲೇಜು ಆವರಣದಲ್ಲಿ ಗುರುವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ವಾಲ್ಮೀಕಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನಾಯಕ ಜನಾಂಗ ಆಗಮಿಸಲಿದ್ದು, ಚಿತ್ರದುರ್ಗ ಜಿಲ್ಲೆಯಿಂದ ಕ್ರಿಯಾಶೀಲರಾಗಿರುವ ಐದು ಮಂದಿ ಪದಾಧಿಕಾರಿಯನ್ನು ನೇಮಕ ಮಾಡಿ ಅವರಿಗೆ ಬ್ಯಾಡ್ಜ್‍ಗಳನ್ನು ನೀಡಲಾಗುವುದು. ಪ್ರಾದೇಶಿಕವಾಗಿ ನಮ್ಮ ಜನಾಂಗವನ್ನು ನಾಯಕ, ಬೇಡ, ಬೇಡರ್, ತಳವಾರ ಹೀಗೆ ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ, ಊರ ನಾಯಕ, ಮ್ಯಾಸ ನಾಯಕ ಎನ್ನುವ ವ್ಯತ್ಯಾಸ ಬೇಡ. ನಾವೆಲ್ಲಾ ನಾಯಕರು ಎನ್ನುವ ಮನೋಭಾವನೆ ಬೆಳೆಸಿಕೊಳ್ಳಿ. ರಾಜ್ಯದ 125 ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕ ಜನಾಂಗದ ಮತಗಳು ನಿರ್ಣಾಯಕ ಪಾತ್ರ ವಹಿಸಿವೆ, ಪ್ರವರ್ಗ-1 ರಲ್ಲಿ ಮ್ಯಾಸನಾಯಕ ಎಂದು ಹೋರಾಟಕ್ಕೆ ಇಳಿದರೆ ಕುಲಶಾಸ್ತ್ರ ಅಧ್ಯಯನವಾಗಬೇಕು. ನಮ್ಮ ಬೆಳವಣಿಗೆಯನ್ನು ಸಹಿಸದ ಕೆಲವು ಬೇರೆ ಜಾತಿಯವರು ನಮ್ಮ ವಿರುದ್ದವಿದ್ದಾರೆ. ಅದಕ್ಕಾಗಿ ಅತಿ ಜಾಗರೂಕರಾಗಿರಬೇಕು. ಶೇ.3.ರಷ್ಟು ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಳ ಮಾಡಬೇಕೆಂಬುದು ನಮ್ಮ ಬಹುದಿನಗಳ ಹೋರಾಟ. ನಾಯಕ ಜನಾಂಗ ಮೊದಲು ಸಂಘಟಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸಬೇಕಾಗಿದೆ. ರಾಜವೀರ ಮದಕರಿನಾಯಕ ಹೆಸರಲ್ಲಿ ಗ್ರೀನ್ ಪಾರ್ಕ್ ನಿರ್ಮಿಸುವುದಾಗಿ ಬಿಜೆಪಿ.ಆಶ್ವಾಸನೆ ನೀಡಿದೆ. ಅದರ ಬಗ್ಗೆಯೂ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಅದಕ್ಕಾಗಿ ವಾಲ್ಮೀಕಿ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ಪೂರ್ವಭಾವಿ ಸಭೆಯಲ್ಲಿ ನಾಯಕ ಜನಾಂಗದವರಲ್ಲಿ ಸ್ವಾಮೀಜಿ ಮನವಿ ಮಾಡಿದರು.
ಚಿತ್ರದುರ್ಗದಲ್ಲಿ ಶಾಖಾ ಮಠ ತೆರೆಯುವಂತೆ ಬೇಡಿಕೆಯಿದೆ. ನಮ್ಮ ಜನಾಂಗದ ಕಲಾವಿದರಿಗೂ ವಾಲ್ಮೀಕಿ ಜಾತ್ರೆಯಲ್ಲಿ ಅವಕಾಶ ನೀಡಲಾಗುವುದು. ರಾಜ್ಯದ 35 ಜಿಲ್ಲೆ 175 ತಾಲ್ಲೂಕುಗಳಲ್ಲಿ ಸುತ್ತಾಡಿ ನಾಯಕ ಜನಾಂಗವನ್ನು ಜಾಗೃತಿಗೊಳಿಸುವ ಕೆಲಸ ಮಾಡಿದ್ದೇನೆ. ಏಕಲವ್ಯ ವಿದ್ಯಾನಿಧಿ, ಐ.ಎ.ಎಸ್, ಕೆ.ಎ.ಎಸ್.ಕೋಚಿಂಗ್ ಸೆಂಟರ್ ತೆರೆಯುವ ಚಿಂತನೆಯಿದೆ. ಇದಕ್ಕೆಲ್ಲಾ ನಾಯಕ ಜನಾಂಗ ಹಾಗೂ ನೌಕರರು ಕೈಜೋಡಿಸಬೇಕು. 1978 ರಲ್ಲಿಯೇ ಎಲ್.ಜಿ.ಹಾವನೂರು ಆಯೋಗದ ವರದಿಯಲ್ಲಿ ನಾಯಕ ಎಂದಿದೆ. ಬುಡಕಟ್ಟು ಸಂಸ್ಕøತಿಯುಳ್ಳ ನಾಯಕ ಜನಾಂಗವನ್ನು ಪರ್ಯಾಯ ಪದಗಳಿಂದ ಕರೆಯುವುದುಂಟು. ನಾಯಕ ಎಂದರೆ ಮೂಲ ಭೇಟೆಗಾರರು ಎಂದು ಹೇಳಿದ ಪ್ರಸನ್ನಾನಂದ ಮಹಾಸ್ವಾಮೀಜಿ ಡಿ.ಬೋರಪ್ಪನವರು ಅವಿರತ ಶ್ರಮ ಕಷ್ಟಪಟ್ಟು ವಿದ್ಯಾಸಂಸ್ಥೆಯನ್ನು ಕಟ್ಟಿದ್ದಾರೆ. ಶಿಕ್ಷಣ ಸಂಸ್ಥೆ ಕಟ್ಟುವುದು ತುಂಬಾ ಕಷ್ಟ. ಅದರ ಅನುಭವ ನನಗೂ ಇದೆ. ಕೊರೋನಾ ಬಂದ ಮೇಲೆ ಸಂಸ್ಥೆಗಳನ್ನು ಉಳಿಸುವುದು ಇನ್ನು ಕಷ್ಟದ ಕೆಲಸ. ಅನೇಕ ಸಮಸ್ಯೆ, ಸವಾಲುಗಳು ಎದುರಾಗುತ್ತವೆ. ಎಲ್ಲವನ್ನು ನಿಭಾಯಿಸಿಕೊಂಡು ಹೋಗಬೇಕು ಎಂದು ಆಡಳಿತಾಧಿಕಾರಿ ಸಂದೀಪ್‍ರವರಿಗೆ ಆತ್ಮಸ್ಥೈರ್ಯ ತುಂಬಿದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷ ಬಿ.ಕಾಂತರಾಜ್, ನಗರಸಭಾಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಮದಕರಿನಾಯಕ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಸಂದೀಪ್, ಜಿಲ್ಲಾ ನಾಯಕ ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಸದಾನಂದ, ನಗರಸಭಾ ಸದಸ್ಯ ದೀಪು, ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್, ನಾಯಕ ಸಮಾಜದ ಮುಖಂಡರುಗಳಾದ ಸಿರುವಲ್ಲಪ್ಪ, ಸರ್ವೆ ಬೋರಯ್ಯ, ಓಬಳೇಶ ನಾಯಕ, ಮಲ್ಲಿಕಾರ್ಜುನ್, ಪೊಲೀಸ್ ಅಧಿಕಾರಿ ತಿಪ್ಪೇಸ್ವಾಮಿ, ಪ್ರಸನ್ನ, ನ್ಯಾಯವಾದಿ ಅಶೋಕ್‍ಬೆಳಗಟ್ಟ, ಸೋಮೇಂದ್ರ ಇನ್ನು ಮುಂತಾದವರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.