ಹೋಮಿಯೋಪಥಿ ಚಿಕಿತ್ಸೆ ಬಗ್ಗೆ ವ್ಯಾಪಕ ಜಾಗೃತಿ ಅಗತ್ಯ

ಕಲಬುರಗಿ.ಏ.10: ಯಾವುದೇ ಅಡ್ಡಪರಿಣಾಮಗಳಿಲ್ಲದ, ಬಹುತೇಕ ಎಲ್ಲಾ ಕಾಯಿಲೆಗಳಿಗೆ ಸೂಕ್ತ ಪರಿಣಾಮಕಾರಿಯಾದ ಚಿಕಿತ್ಸೆ ಹೊಂದಿರುವ, ರೋಗ ಮುಕ್ತತೆ ಹೊಂದಿ ಜೀವನ ನಿರ್ವಹಣೆಗೆ ಪೂರಕವಾದ, ವಿಶೇಷ ಚಿಕಿತ್ಸಯ ವಿಧಾನವಾದ ಹೋಮಿಯೋಪಥಿಯ ಬಗ್ಗೆ ಜನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆಯೆಂದು ಖ್ಯಾತ ಹೋಮಿಯೋಪಥಿ ತಜ್ಞ ಡಾ.ಶರಣ ಕಂಠಿ ಅಭಿಪ್ರಾಯಪಟ್ಟರು.
ನಗರದ ಗೋವಾ ಹೋಟೆಲ್ ಸಮೀಪದಲ್ಲಿರುವ ‘ನಂದಿ ಹೋಮಿಯೋ ಕ್ಲಿನಿಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ವು ಶನಿವಾರ ಸಂಜೆ ಏರ್ಪಡಿಸಿದ್ದ ‘ವಿಶ್ವ ಹೋಮಿಯೋಪಥಿ ದಿನಾಚರಣೆ’ಯನ್ನು ಹೋಮಿಯೋಪಥಿ ಪಿತಾಮಹ ಹ್ಯಾನಮನ್‍ರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ, ನಂತರ ಬಳಗದ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಹೋಮಿಯೋಪಥಿ ಚಿಕಿತ್ಸೆ ಡಾ.ಹ್ಯಾನಮನ್ ಅವರ ದೀರ್ಘ ಸಂಶೋಧನೆಯ ಫಲವಾಗಿ 1756ರಲ್ಲಿ ಪದ್ಧತಿ ಉದಯವಾಗಿದೆ. ಇದರ ಬಗ್ಗೆ ನಿಧಾನ ಮತ್ತು ದೀರ್ಘಾವಧಿ, ಸಂಪೂರ್ಣ ಚಿಕಿತ್ಸೆ ಅಸಾಧ್ಯ, ಅಡ್ಡಪರಿಣಾಮಗಳಿಂದ ಮುಕ್ತವಾಗಿಲ್ಲವೆಂಬ ಕೆಲವು ತಪ್ಪು ಕಲ್ಪನೆಗಳಿವೆ. ‘ಸಾಮ್ಯವು ಸಾಮ್ಯವನ್ನು ಗುಣಪಡಿಸುತ್ತದೆ’ಯೆಂಬ ತತ್ವ ಇದರಲ್ಲಿ ಒಳಗೊಂಡಿದೆ. ಅಂದರೆ ಯಾವುದು ರೋಗ ಉಂಟುಮಾಡುತ್ತದೆಯೋ, ಅದನ್ನೇ ಔಷಧಿಯನ್ನಾಗಿ ಶಾಸ್ತ್ರೀಯವಾಗಿ ರೋಗಿಯ ಮೇಲೆ ಪ್ರಯೋಗಿಸುವ ಮೂಲಕ ಸಂಪೂರ್ಣ ಚಿಕ್ಸತೆಯನ್ನು ಮಾಡುವ ಗುಣ ಹೋಮಿಯೋಪಥಿ ಹೊಂದಿದೆ. ಆದರೆ ಈ ಚಿಕಿತ್ಸೆಯ ಹೆಸರಿನಲ್ಲಿ ವ್ಯಾಪಾರೀಕರಣ ಮಾಡಿ, ಚಿಕಿತ್ಸೆ ಬಗ್ಗೆ ಅಪನಂಬಿಕೆ ಮೂಡುವಂತಹ ಕೆಲಸವಾಗಬಾರದೆಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಅಮರೇಶ ಪತ್ತಾರ, ಡಾ.ಸಂಜೀವ ಅಗಷ್ಟೀನ್, ಎಚ್.ಬಿ.ಪಾಟೀಲ, ನರಸಪ್ಪ ಬಿರಾದಾರ ದೇಗಾಂವ, ಎಂ.ಬಿ.ನಿಂಗಪ್ಪ, ಸುನೀಲಕುಮಾರ ವಂಟಿ, ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ರವೀಂದ್ರ ಸಿರ್ಕನಳ್ಳಿ, ರಾಚಣ್ಣ ಕೊಡಲಹಂಗರಗಾ, ರಾಘವೇಂದ್ರ ಗುಂಜೋಟಿ, ಸಾಯಿಪ್ರಸಾದ, ಸುಜಯ್ ಸೇರಿದಂತೆ ಮತ್ತಿತರರಿದ್ದರು.