ಹೋಮಿಯೋಪತಿಯಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ-ಪ್ರೋ.ಸಬರದ

   

ಧಾರವಾಡ ಎ.07-: ಉಚಿತ ಚಿಕಿತ್ಸೆ ನೀಡುತ್ತಿದ್ದ ಡಾ. ಸಿನ್ನೂರ ಅವರು ಮಹಾನ್ ವ್ಯಕ್ತಿ. ಹೋಮಿಯೋಪಥಿ ಚಿಕಿತ್ಸೆಯಿಂದ ಆರೋಗ್ಯ ಸ್ವಸ್ಥ ಜೀವನವನ್ನು ಬದುಕುವುದೇ ಅಸಾಧ್ಯ ಎಂಬ ನಿಲುವಿಗೆ ಬಂದವರಿಗೆ ಹೋಮಿಯೋಪಥಿ ಚಿಕಿತ್ಸೆ ಜೀವದಾನ ನೀಡಿದೆ. ಅದಕ್ಕೆ ಸ್ವತಃ ನಾನೇ ಉದಾಹರಣೆ ಎಂದು ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಪ್ರೊ. ಎ.ಜಿ. ಸಬರದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು “ಖ್ಯಾತ ಹೋಮಿಯೋಪಥಿ ವೈದ್ಯ” ಡಾ. ಎಚ್.ಎಚ್. ಸಿನ್ನೂರ ದತ್ತಿ ಅಂಗವಾಗಿ ಆಯೋಜಿಸಿದ್ದ ದತ್ತಿ ಉದ್ಘಾಟನೆ, ಉಪನ್ಯಾಸ ಹಾಗೂ ಸನ್ಮಾನ ಸಮಾರಂಭದ ಕಾರ್ಯಕ್ರಮದಲ್ಲಿ ದತ್ತಿ ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು. ಹೋಮಿಯೋಪಥಿಯಲ್ಲಿ ಅಸಾಧ್ಯವಾದುದು ಯಾವುದು ಇಲ್ಲ, ಎಲ್ಲವೂ ಸಾಧ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಮನುಷ್ಯ ಅನಾರೋಗ್ಯದಿಂದ ಬಳಲಿ ಕುಂದಿ ಹೋಗಿದ್ದಾನೆ. ಆರೋಗ್ಯವೇ ಭಾಗ್ಯ ಎಂದರು.
ಹೋಮಿಯೋಪಥಿ ವೈದ್ಯಕೀಯ ಕ್ಷೇತ್ರಕ್ಕೆ ಡಾ. ಎಚ್.ಎಚ್. ಸಿನ್ನೂರರ ಕೊಡುಗೆ ವಿಷಯ ಕುರಿತು ಅತಿಥಿ ಉಪನ್ಯಾಸಕರಾದ ಧಾರವಾಡ ದ.ಭಾ.ಹಿ.ಪ್ರ. ಸಭೆಯ ಬಿ.ಡಿ.ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಮಂಜುಳಾ ಹಳೆಹೊಳಿ (ನಂದಿ) ಮಾತನಾಡುತ್ತಾ ಸಿನ್ನೂರ ಅವರ ಮನೆತನದ ಪರಿಸ್ಥಿತಿಯೇ ನಾಜೂಕಾಗಿರುವ ಸಂದರ್ಭದಲ್ಲಿಯೂ ಜನರಿಗೆ ಉಚಿತ ಚಿಕಿತ್ಸೆ ಔಷಧಿ ನೀಡಿ ಧೈರ್ಯ ನೀಡಿದ ಮಹಾನ್ ವ್ಯಕ್ತಿ ಎಂದರು. ಅಲ್ಲದೇ ಈ ಹೋಮಿಯೋಪಥಿ ಚಿಕಿತ್ಸೆ ಮೂಲ ಜರ್ಮನಿಯ ವೈದ್ಯರು ಕಂಡು ಹಿಡಿದಿದ್ದು, 17-18ನೇ ಶತಮಾನದಲ್ಲಿ ಭಾರತಕ್ಕೆ ಬಂದುದಾಗಿಯೂ, ಮೊದ ಮೊದಲು ರಾಜಮನೆತನದವರು ಚಿಕಿತ್ಸೆ ತೆಗೆದುಕೊಂಡು ಪ್ರಚಾರಗೊಳಿಸಿದರು ಎಂದರು. ಪ್ರಕೃತಿದತ್ತವಾಗಿ ನಡೆಯುವ ಈ ಚಿಕಿತ್ಸೆ ಬಹಳ ಮಹತ್ವದ್ದು ಎಂದರು.
ಇದೇ ಸಂದರ್ಭದಲ್ಲಿ 2020 ನೇ ಸಾಲಿನ ಸನ್ಮಾನಕ್ಕೆ ಭಾಜನರಾದ ಧಾರವಾಡ ದ.ಭಾ.ಹಿ.ಪ್ರ. ಸಭೆಯ ಬಿ.ಡಿ.ಜತ್ತಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಆನಂದ ಕುಲಕರ್ಣಿ ಹಾಗೂ 2021ನೇ ಸಾಲಿನ ಸನ್ಮಾನಕ್ಕೆ ಭಾಜನರಾದ ಧಾರವಾಡದ ಸಮಾಜ ಸೇವಕಿ ಮಾಧುರಿ ಚಿಕ್ಕೋಡಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಡಾ. ಆನಂದ ಕುಲಕರ್ಣಿ ಮಾತನಾಡಿ, ಡಾ. ಪಾರ್ವತಿ ಹಾಗೂ ಸುರೇಶ ಹಾಲಭಾವಿಯವರು ತಮ್ಮ ಗುರುಗಳಾದ ಡಾ. ಎಚ್.ಎಚ್. ಸಿನ್ನೂರ ಅವರ ಹೆಸರಿನಲ್ಲಿ ಕ.ವಿ.ವ. ಸಂಘದಲ್ಲಿ ದತ್ತಿ ಸ್ಥಾಪಿಸಿ, ಅವರು ಹೋಮಿಯೋಪಥಿಯಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಸ್ಮರಿಸುತ್ತಿರುವುದು ಅದಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ ಮೊದಲಿಗನಾಗಿ ಸನ್ಮಾನಗೊಳ್ಳುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಇದು ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ. ಅದಕ್ಕಾಗಿ ದತ್ತಿದಾನಿಗಳಿಗೂ ಮತ್ತು ಕ.ವಿ.ವ. ಸಂಘಕ್ಕೂ ಹೃದಯತುಂಬಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ವೇದಿಕೆ ಮೇಲೆ ಸಂಘದ ಕಾರ್ಯಾಧ್ಯಕ್ಷರಾದ ಶಿವಣ್ಣ ಬೆಲ್ಲದ ಹಾಗೂ ಸುರೇಶ ಹಾಲಭಾವಿ ಉಪಸ್ಥಿತರಿದ್ದರು. ಪಾರ್ವತಿ ಹಾಲಭಾವಿ ಅವರು ದತ್ತಿ ಆಶಯ ಕುರಿತು ಮಾತನಾಡಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಬ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಡಾ. ತೃಪ್ತಿ ಹಾಗೂ ಕಲಾವಿದ ಡಾ. ಮೃತ್ಯುಂಜಯ ಶೆಟ್ಟರ ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ್ಯದರ್ಶಿ ಸದಾನಂದ ಶಿವಳ್ಳಿ, ಡಾ. ಜಿನದತ್ತ ಹಡಗಲಿ, ಶ್ರೀಮತಿ ಸುಜಾತಾ ಹಡಗಲಿ, ಪ್ರೊ. ಎಂ. ಆರ್. ಬಾಳಿಕಾಯಿ, ಮಹಾಂತೇಶ ನರೇಗಲ್, ರಾಮಚಂದ್ರ ದೋಂಗಡೆ, ಚನಬಸಪ್ಪ ಅವರಾದಿ, ಮಧುಮತಿ ಸಣಕಲ್ ಸೇರಿದಂತೆ ಡಾ. ಸಿನ್ನೂರರ ಅಭಿಮಾನಿಗಳು, ಶಿಷ್ಯಂದಿರು ಮುಂತಾದವರು ಭಾಗವಹಿಸಿದ್ದರು.