ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ಆರಂಭಿಸಲು ರೈತ ಸಂಘ ಒತ್ತಾಯ

ಬಳ್ಳಾರಿ, ನ.9: ಭತ್ತ, ಹತ್ತಿ, ಮೆಣಸಿನಕಾಯಿ ಮೊದಲಾದ ಬೆಳಗಳ ದರ ಮಾರುಕಟ್ಟೆಯಲ್ಲಿ ಬೆಂಬ ಲ‌ಬೆಲೆಗಿಂತ ಕಡಿಮೆಯಾಗಿರುವ ಕಾರಣ ಸರ್ಕಾರ ಹೋಬಳಿ‌ಮಟ್ಟದಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘ ಒತ್ತಾಯಿಸಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಆರ್. ಮಾಧವ ರೆಡ್ಡಿ ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ, ಸರ್ಕಾರ 2020-21ನೇ ಸಾಲನೆ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಯೋಜನೆಯಡಿಯಲ್ಲಿ ಘೋಷಣೆ ಮಾಡಿದಂತೆ ಇವತ್ತಿನವರೆಗೆ ರಾಜ್ಯದಲ್ಲಿ ಎಲ್ಲೂ ಕೂಡಾ ಖರೀದಿ ಕೇಂದ್ರಗಳನ್ನು ತೆಗೆದಿರುವುದಿಲ್ಲ. ಈ ತಕ್ಷಣವೇ ಎಲ್ಲಾ ಬೆಳೆಗಳಿಗೆ ಖರೀದಿ ಕೇಂದ್ರಗಳನ್ನು ಶಾಶ್ವತವಾಗಿ ತೆಗೆಯಬೇಕೆಂದು ಒತ್ತಾಯಿಸಿ ನಾಡಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆಂದು ತಿಳಿಸಿದರು.
ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ರೈತರಿಗೆ ಮರಣಶಾಸನವಾಗಿರುವ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು, ಪ್ರತಿ ರೈತರಿಂದ 150 ಕ್ವಿಂಟಾಲ್ ಭತ್ತವನ್ನು ಖರೀದಿ ಮಾಡಬೇಕು. ಹಾಗೂ ಪ್ರತಿ ಕ್ವಿಂಟಾಲ್ ಭತ್ತಕ್ಕೆ 5 ಸಾವಿರದಂತೆ, ಹತ್ತಿಗೆ 20 ಸಾವಿರ, ಮೆಣಸಿನಕಾಯಿಗೆ 30 ಸಾವಿರ ರೂ ನಿಗದಿಪಡಿಸಬೇಕು. ಪ್ರತಿ ರೈತರಿಂದ 100 ಕ್ವಿಂಟಾಲ್ ಜೋಳವನ್ನು ಖರೀದಿ ಮಾಡಬೇಕು ಹಾಗೂ ಪ್ರತಿ ಕ್ವಿಂಟಾಲ್‌ಗೆ 5 ಸಾವಿರ
ನಿಗದಿಪಡಿಸಬೇಕು. ನವಣಿ ಮತ್ತು ಸಜ್ಜೆಗೆ 3 ಸಾವಿರ ನಿಗದಿ‌ಪಡಿಸಬೇಕು.
ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಿದಂತಹ ರೈತರ ಖಾತೆಗಳಿಗೆ ಹಣ ವಿಳಂಬ ಮಾಡದೇ ಅದೇ ದಿನ ವರ್ಗಾಯಿಸಬೇಕು, ಈ ವರ್ಷ ಅತಿವೃಷ್ಟಿಯಿಂದ ರೈತರು ನಷ್ಟ ಹೊಂದಿದ್ದು, ಈ ಸಮಯದಲ್ಲಿ ಬೆಳೆ ಸಾಲ ತೆಗೆದುಕೊಂಡವರಿಗೆ ಬ್ಯಾಂಕ್ ಅಧಿಕಾರಿಗಳು ಸಾಲ ಕಟ್ಟುವಂತೆ ಕಿರುಕುಳ ನೀಡುವುದನ್ನು ತಡೆಯಬೇಕು. ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಅತೀ ಶೀಘ್ರದಲ್ಲೇ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ 2ನೇ ಬೆಳೆಗೆ ನೀರು ಕೊಡಲು ತೀರ್ಮಾನಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಮುಖಂಡರುಗಳಾದ ತಿಮ್ಮನಗೌಡ, ಗೋವಿಂದಪ್ಪ, ಗಂಗೀರೆಡ್ಡಿ, ಲೇಪಾಕ್ಷಿ ಅಸುಂಡಿ, ಮಂಜುನಾಥ ಆಚಾರಿ, ಹಳ್ಳಪ್ಪ, ಸಂಜೀವರೆಡ್ಡಿ, ಬಸವರಾಜ್ ಸ್ವಾಮಿ ಮೊದಲಾದವರು ಇದ್ದರು.