ಹೋಬಳಿಯಲ್ಲಿ ಶೇ ೭೫ರಿಂದ ೮೫ರಷ್ಟು ಮತದಾನ

ವಿಜಯಪುರ.ಏ೨೭: ಪಟ್ಟಣದಲ್ಲಿ ಬೆಳಗಿನ ವೇಳೆ ೭:೩೦ರ ಹೊತ್ತಿಗೆ ಮತದಾನ ಚುರುಕುಕೊಂಡರೆ ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಕಡೆ ೮:೩೦ ೯:೦೦ ವರೆಗೆ ಕೇವಲ ಬೆರಳೆಣಿಕೆ ಮತದಾನ ನಡೆದಿದ್ದು ಮತದಾರರು ಮತಗಟ್ಟೆಗೆ ಬಂದಿರಲಿಲ್ಲ. ಆದರೆ ಮಧ್ಯಾಹ್ನದ ನಂತರ ಗ್ರಾಮೀಣ ಪ್ರದೇಶದಲ್ಲಿ ಮತದಾನ ಚುರುಕುಕೊಂಡಿದ್ದು ಕೆಲವಷ್ಟು ಕಡೆ ೮೫ ರಿಂದ ೯೦ ರಷ್ಟು ಮತದಾನ ನಡೆದಿದ್ದು ಕಂಡುಬಂದಿತು.
ಹೋಬಳಿಯಾದ್ಯಂತ ಸಂಪೂರ್ಣ ಬಂದೋಬಸ್ತ್ ಏರ್ಪಡಿಸಲಾಗಿದ್ದು ಯಾವುದೇ ಅಹಿತಕರ ಘಟನೆಗಳು ಕಂಡುಬರಲಿಲ್ಲ. ಧರ್ಮಪುರದ ಒಂದು ಬೂತ್ನಲ್ಲಿ ಬೇರೆಡೆ ಮತದಾನ ಮಾಡಿ ಬಂದವರು ಇಲ್ಲಿಯೂ ಸಹ ಹೆಸರು ಮತಪಟ್ಟಿಯಲ್ಲಿ ಇದ್ದ ಕಾರಣ ಮತದಾನ ಮಾಡಲು ಬಂದ ಪ್ರಸಂಗ ಕಂಡುಬಂದಿತು.
ಹಾರೋಹಳ್ಳಿಯ ಮತಗಟ್ಟೆಯೊಂದರಲ್ಲಿ ೧೦೨ ವರ್ಷ ವಯಸ್ಸಿನ ನರಸಮ್ಮ ಎಂಬ ವೃದ್ದೆ ತಮ್ಮ ಮಗ ಮುನಿಯಪ್ಪ ರವರೊಂದಿಗೆ ಮತದಾನ ಮಾಡಿದ್ದು ವಿಶೇಷವಾಗಿತ್ತು. ವೃದ್ದರು ಹಾಗೂ ಅಂಗವಿಕಲರುಗಳಿಗೆ ಅವರುಗಳ ಮನೆ ಬಾಗಿಲಲ್ಲಿಯೇ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಿದ್ದರು ಸಹ ಬಹಳಷ್ಟು ಮಂದಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿರುವುದು ಕಂಡುಬಂದಿತು.