
ಬಳ್ಳಾರಿ,ಏ.16- ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ, ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾವುದೇ ಚುನಾವಣಾ ಅಕ್ರಮಗಳಿಗೆ ಸಹಕರಿಸದಂತೆ ಹೋಟೆಲ್ ಮಾಲೀಕರುಗಳಿಗೆ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಅವರು ಸೂಚನೆ ನೀಡಿದರು.
ವಿಧಾನಸಭೆ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ನೀತಿ ಸಂಹಿತೆ ಪಾಲನೆ ಕುರಿತು ಹೋಟೆಲ್ ಮಾಲೀಕರೊಂದಿಗೆ ಶನಿವಾರದಂದು ತಮ್ಮ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಮುಕ್ತ, ನ್ಯಾಯಸಮ್ಯತ, ಪಾರದರ್ಶಕ ಹಾಗೂ ಶಾಂತಿಯುತ ಚುನಾವಣೆಯನ್ನು ನಡೆಸಲು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ತಂಡಗಳನ್ನು ರಚಿಸಿ, ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಯಾರೂ ಕೂಡ ಚುನಾವಣೆಯ ಅಕ್ರಮಗಳಿಗೆ ಸಹಕಾರ ನೀಡಬಾರದು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಗರು ಗುಂಪು ಗುಂಪಾಗಿ ಹೋಟೇಲ್‍ಗಳಿಗೆ ಭೇಟಿ ನೀಡಿದಾಗ ಮತ್ತು ಅಭ್ಯರ್ಥಿಗಳ ಪರವಾಗಿ ಯಾರೇ ಚೀಟಿ ಅಥವಾ ಟೋಕನ್ ನೀಡಿ ಊಟ-ಉಪಹಾರ ನೀಡುವಂತೆ ಕೋರಿದಲ್ಲಿ ಅಂತಹವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪ್ರಚಾರಕ್ಕೆ ತಗಲುವ ಎಲ್ಲಾ ವೆಚ್ಚಗಳನ್ನು ಚುನಾವಣಾ ವೆಚ್ಚ ವೀಕ್ಷಕರು ಅಭ್ಯರ್ಥಿಯ ಲೆಕ್ಕದಲ್ಲಿ ದಾಖಲು ಮಾಡುವುದರಿಂದ, ಊಟ-ಉಪಚಾರದ ವೆಚ್ಚಗಳನ್ನು ಸಹ ಅಭ್ಯರ್ಥಿಗಳ ಲೆಕ್ಕದಲ್ಲಿ ದಾಖಲಿಸಬೇಕಾಗುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕೈಗೊಳ್ಳುವ ವೆಚ್ಚಗಳ ಬಗ್ಗೆ ನಿಗಾ ವಹಿಸಲಾಗುತ್ತಿದ್ದು, ಹೋಟೆಲ್ ಮಾಲೀಕರು, ಗುಂಪು ಗುಂಪಾಗಿ ಹೋಟೇಲ್‍ಗಳಿಗೆ ಭೇಟಿ ನೀಡಿದಾಗ ಮತ್ತು ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಯಾರೇ ಚೀಟಿ ಅಥವಾ ಟೋಕನ್ ನೀಡಿ ಊಟ-ಉಪಹಾರ ನೀಡುವಂತೆ ಕೋರಿದಲ್ಲಿ ಅಂತಹವರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.
ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮತದಾರರ ಸಹಾಯವಾಣಿ / ಕಂಟ್ರೋಲ್ ರೂಂ (1950) ಹಾಗೂ CVIGIL ಅನ್ನು ತೆರೆಯಲಾಗಿದ್ದು, ಚುನಾವಣೆ ಸಂಬಂಧಿತ ದೂರುಗಳು ಹಾಗೂ ಇನ್ನಿತರೆಗಳನ್ನು ದಾಖಲಿಸಿದಲ್ಲಿ, ನಿಗದಿತ ಸಮಯದೊಳಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣಾ ತಹಶೀಲ್ದಾರರು ಹಾಗೂ ಹೋಟೇಲ್ ಮಾಲೀಕರ ಸಂಘದ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.