ಹೋಟೆಲ್ ಮೇಲೆ ಅಬಕಾರಿ ಪೊಲೀಸರ ದಾಳಿಆರೋಪಿ ಪರಾರಿ

ಹೊಸನಗರ.ಜೂ.೪; ಲಾಕ್ ಡೌನ್ ಘೋಷಣೆಯಾದ ಬಳಿಕ ಅಕ್ರಮ ಮದ್ಯ ಸಂಗ್ರಹ ಹಾಗೂ ಮಾರಾಟದ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅಬಕಾರಿ ಪೊಲೀಸರು ತಮ್ಮ ದಾಳಿ ಚುರುಕುಗೊಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ  ತಾಲೂಕಿನ ಹೆದ್ದಾರಿಪುರ ಗ್ರಾಮದ ಮಾಂಸಹಾರಿ ಹೋಟೆಲ್ ಮೇಲೆ ದಿಢೀರ್ ದಾಳಿ ನೆಡೆಸಿ, ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಸಂಗ್ರಹಿಸಿಟ್ಟಿದ್ದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.ಸದಾಶಿವ ಶೆಟ್ಟಿ ಬಿನ್ ಕೃಷ್ಣಪ್ಪ ಶೆಟ್ಟಿ ಎಂಬುವವರಿಗೆ ಸೇರಿದ ಗಣೇಶ್ ಪ್ರಸಾದ್ ಹೋಟೆಲ್ ಮೇಲೆ ದಾಳಿ ಮಾಡಿ, ಶೋಧನೆ ನೆಡೆಸಿ ಸಂದರ್ಭದಲ್ಲಿ ಇಲಾಖೆ ನಿಗದಿ ಪಡಿಸಿರುವ ಪ್ರಮಾಣಕ್ಕಿಂತ ಅಧಿಕವಾದ ರೂ 5744 ಮೌಲ್ಯದ 14.04 ಲೀಟರ್ ನಷ್ಟು ಭಾರತೀಯ ತಯಾರಿಕ ಮದ್ಯ ದೊರೆತಿದೆ. ಮಾರಾಟದ ಉದ್ದೇಶದಿಂದ ಆರೋಪಿ ಮದ್ಯ ಸಂಗ್ರಹಿಸಿದ್ದು, ದಾಳಿ ವೇಳೆ ಅರೋಪಿ ತಲೆ ಮರೆಸಿಕೊಂಡಿದ್ದಾನೆ. ಆತನ ವಿರುದ್ದ ಕರ್ನಾಟಕ ಅಬಕಾರಿ ಕಾಯ್ದೆ 1965ರಡಿಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಜಿಲ್ಲಾ ಅಬಕಾರಿ ಉಪ ಆಯುಕ್ತ ಕ್ಯಾಪ್ಟನ್ ಅಜಿತ್ ಕುಮಾರ್ ಸೂಚನೆ ಮೇರೆಗೆ, ತೀರ್ಥಹಳ್ಳಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಕುಮಾರ್ ಎಲ್. ತಿಪ್ಪಣ್ಣನವರ್ ಮಾರ್ಗದರ್ಶನದಲ್ಲಿ ಹೊಸನಗರ ಅಬಕಾರಿ ನಿರೀಕ್ಷಕ ಸೈಯದ್ ತಪ್ ಜಿಲ್ ಉಲ್ಲಾ ನೇತೃತ್ವದಲ್ಲಿ ಕಾನ್‌ಸ್ಟೇಬಲ್ ಜಿ.ಎಸ್. ನಾಗರಾಜ್, ಪಾಂಡು ಅಂಬವ್ವಗೋಳ, ಚಾಲಕ ಉಮೇಶ್ ದಾಳಿ ಮಾಡಿದ್ದರು.