ಹೋಟೆಲ್ ತಿಂಡಿ, ಕಾಫಿ, ಟೀ ದರ ಹೆಚ್ಚಿಸಲು ನಿರ್ಧಾರ

ಕಲಬುರಗಿ,ಡಿ.1-ಹೋಟೆಲ್‍ಗಳಲ್ಲಿ ಕಾಫಿ, ಟೀ ಮತ್ತು ತಿಂಡಿಗಳ ದರ ಹೆಚ್ಚಿಸಲು ಕಲಬುರಗಿ ಹೋಟೆಲ್ ಮಾಲಿಕರ ಸಂಘ ನಿರ್ಧರಿಸಿದೆ.
ಅಡುಗೆ ಅನಿಲ ಬೆಲೆ, ತೈಲ ಬೆಲೆ, ಅಗತ್ಯ ವಸ್ತುಗಳು, ತರಕಾರಿ ಹಾಗೂ ಧವಸಧಾನ್ಯಗಳ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ದರ ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೋಟೆಲ್ ಮಾಲಿಕರ ಸಂಘದ ನರಸಿಂಹ ಮೆಂಡನ್ ತಿಳಿಸಿದ್ದಾರೆ.
ಈಗಿರುವ ಟೀ, ಕಾಫಿ ಬೆಲೆಯನ್ನು 2 ರೂಪಾಯಿಗಳವರಗೆ, ತಿಂಡಿ ಬೆಲೆಯನ್ನು 5 ರೂಪಾಯಿಗಳವರೆಗೆ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಗ್ರಾಹಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ತಿಂಡಿಗಳ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಅಗತ್ಯ ವಸ್ತುಗಳ ಜೊತೆಗೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು 2,200 ರೂಪಾಯಿಗಳವರಗೆ ಹೆಚ್ಚಳ ಮಾಡಿರುವುದರಿಂದ ಹೋಟೆಲ್ ತಿಂಡಿಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದ್ದು, ಅದಕ್ಕಾಗಿ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ದರ ಹೆಚ್ಚಳ ಮಾಡಲಾಗುವುದು ಎಂದು ಮೆಂಡನ್ ತಿಳಿಸಿದ್ದಾರೆ.