ಹೋಟೆಲ್ ಕಾರ್ಮಿಕರಿಗೆ ಪರಿಹಾರಕ್ಕೆ ಒತ್ತಾಯ

ಮೈಸೂರು, ಮೇ.28: ಹೋಟೆಲ್ ಕಾರ್ಮಿಕರಿಗೆ ಪರಿಹಾರ ಮತ್ತು ನೆರವು ಕೋರಿ ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರಿಗೆ ಹೋಟೆಲ್ ಕಾರ್ಮಿಕರ ಒತ್ತಾಯಿಸಿದೆ.
ಸುಮಾರು ಒಂದು ತಿಂಗಳಿನಿಂದ ಕೋವಿಡ್ ತಡೆಗಟ್ಟುವ ಸಲುವಾಗಿ ರಾಜ್ಯಾದ್ಯಂತ ನಿರ್ಬಂಧ ಜಾರಿಯಲ್ಲಿದ್ದು ಯಾವುದೇ ಹೋಟೆಲ್ ಪೂರ್ಣ ಪ್ರಮಾಣದಲ್ಲಿ ತೆರೆಯದೆ ಇರುವುದರಿಂದ ಹಲವಾರು ಕಾರ್ಮಿಕರು ಕೆಲಸವಿಲ್ಲದೆ, ಆದಾಯವಿಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದು ಇದೇ ವೃತ್ತಿಯನ್ನು ಅವಲಂಬಿಸಿರುವ ನಾವುಗಳು ಯಾವುದೇ ಬೇರೆ ಕೆಲಸ ಸಿಗದೆ ನಮ್ಮ ಮತ್ತು ಕುಟುಂಬದವರ ಬದುಕು ಅಯೋಮಯವಾಗಿದೆ ಎಂದರು.
ಇತ್ತೀಚೆಗೆ ಸರ್ಕಾರದಿಂದ ಕೆಲವು ಕಾರ್ಮಿಕರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದ್ದರೂ ಹೋಟೆಲ್ ಕಾರ್ಮಿಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲದಿರುವುದರಿಂದ ನಾವುಗಳು ಆರ್ಥಿಕ ಸಂಕಷ್ಟದಲ್ಲಿರುವುದು ನಿಮ್ಮ ಕಣ್ಣಿಗೆ ಕಾಣದೆ ಹೋಗಿದೆ. ನಾವು ಕೂಡ ಕಾರ್ಮಿಕರಾಗಿ ಹೋಟೆಲ್ ಗಳಲ್ಲಿ ರಾಜಕೀಯ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಇನ್ನಿತರ ವಿವಿಧ ಕಾರ್ಯಕ್ರಮಗಳಲ್ಲಿ ರುಚಿ ಮತ್ತು ಶುಚಿಯಾಗಿ ಅಡುಗೆ ಮಾಡಲು ಹಾಗೂ ಸ್ವಚ್ಛತೆ ಕಾಪಾಡಲು ಕಷ್ಟಪಟ್ಟು ದುಡಿಯುತ್ತಿರುವವರು ಇಂದು ಕೆಲಸವಿಲ್ಲದೆ ದುಡಿಮೆಯಿಲ್ಲದೆ ಹಣವಿಲ್ಲದೆ ನಮ್ಮ ಜೀವನ ಬೀದಿ ಪಾಲಾಗಿದೆ ಎಂದರು.
ಕೆಲವು ಹೋಟೆಲ್ ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಮಾತ್ರ ಇದ್ದು ಎಲ್ಲಾ ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿ ಮಾಲೀಕರುಗಳೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಜೀವನಕ್ಕೆ ಯಾವುದೇ ಆಧಾರವಿಲ್ಲದೆ ನಮ್ಮ ಮತ್ತು ಕುಟುಂಬದ ಇತರೆ ಖರ್ಚು ವೆಚ್ಚಗಳಿಗೆ ಹಣವಿಲ್ಲದೆ ಸಾಲ ತೀರಿಸಲಾಗದೆ ನಾವುಗಳು ಸಾಯುವ ಸ್ಥಿತಿ ಬಂದೊದಗಿದೆ ಎಂದರು.
ಹೋಟೆಲ್ ಗಳಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಪ್ರತಿಯೊಬ್ಬರೂ ರಾಜ್ಯದ ಪ್ರಜೆಯಾಗಿದ್ದು ನಾವುಗಳು ಕೂಡ ನಿಮಗೆ ಮತ ನೀಡಿದ್ದೇವೆ. ನಮ್ಮನ್ನು ಇತರೆ ಕಾರ್ಮಿಕರಂತೆ ಕಾರ್ಮಿಕರು ಎಂದು ಪರಿಗಣಿಸಿ ಈ ಕಷ್ಟದ ಪರಿಸ್ಥಿತಿಯಲ್ಲಿ ನಮ್ಮ ಮತ್ತು ನಮ್ಮ ಕುಟುಂಬದ ಜೀವನ ನಿರ್ವಹಣೆಗೆ ಅಗತ್ಯವಾದ ಪರಿಹಾರ ಮತ್ತು ಪಡಿತರವನ್ನು (ಜಿಲ್ಲೆ,ತಾಲೂಕು, ಗ್ರಾಮಮಟ್ಟದಲ್ಲಿ) ನೀಡಬೇಕೆಂದು ಹಾಗೂ ಆದ್ಯತೆಯ ಮೇರೆಗೆ ಆರ್ಥಿಕ ಸಹಾಯ ಘೋಷಣೆ ಮಾಡಿ ನಮಗೂ ಸಮಾಜದಲ್ಲಿ ಸಾಮಾನ್ಯ ಜೀವನ ನಡೆಸಲು ಸಹಕರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಸಂಸ್ಥಾಪಕ ರಾಜ್ಯಾಧ್ಯಕ್ಷ ನಾಗರಾಜು, ಮಹಿಳಾ ರಾಜ್ಯಾಧ್ಯಕ್ಷರಾದ ಪ್ರಿಯ ರಮೇಶ್, ರಾಜ್ಯ ಉಪಾಧ್ಯಕ್ಷರಾದ ಗಿರೀಶ್, ಸುರೇಶ್ ಟಿ,ಎನ್, ರಾಜ್ಯ ಕಾರ್ಯಧ್ಯಕ್ಷರಾದ ಅನಂತು ದಾಸ್, ಶಿವನಾಗ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಖಜಾಂಚಿ ಸತೀಶ್ ಹೆಚ್,ಆರ್, ಸಿದ್ದರಾಜು ಮೈಸೂರು ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ್ ,ಜಿಲ್ಲಾ ಉಪಾಧ್ಯಕ್ಷ ಸೋಮು, ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿವಮೂರ್ತಿ ಉಪಸ್ಥಿತರಿದ್ದರು.