ಹೋಟೆಲ್‌ಗಳಿಗೆ ಶೇ.50 ತೆರಿಗೆ ವಿನಾಯಿತಿ

ಬೆಂಗಳೂರು, ನ.೨೫- ಪ್ರಸ್ತುತ ಹಣಕಾಸು ವಾರ್ಷಿಕ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಗಳ ಆಸ್ತಿ ತೆರಿಗೆಯಲ್ಲಿ ಶೇ.೫೦ ರಷ್ಟು ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ತೆರಿಗೆ ಸಂಬಂಧ ಅರ್ಜಿಗಳನ್ನು ವರ್ಗವಾರು ಕಂದಾಯ ನಿರೀಕ್ಷಕರಿಂದ ಪರಿಶೀಲನೆಗೊಳಿಸಬೇಕು. ಈ ರಿಯಾಯಿತಿ ನೀಡಲು ಸಲ್ಲಿಸಿದ ವಿವರವಾದ ವರದಿಯನ್ನು ಡಿಯುಡಿಸಿ ಅಥವಾ ಯುಎಲ್‌ಬಿ ಯೋಜನಾ ನಿರ್ದೇಶಕರು ಪರಿಶೀಲಿಸಬೇಕು. ಜಿಲ್ಲಾ ಮಟ್ಟದ ಸಮಿತಿಯು ಈ ಕ್ಲೇಮ್, ಬಿಲ್ಲುಗಳನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು ಎಂದು ಕೆಲ ಷರತ್ತುಗಳನ್ನು ವಿಧಿಸಲಾಗಿದೆ.
ಆಸ್ತಿ ತೆರಿಗೆಯಲ್ಲಿ ನೀಡಿರುವ ರಿಯಾಯಿತಿ ಮೊತ್ತವನ್ನು ಸರ್ಕಾರದಿಂದ ಹಿಂಭರಿಸಲು ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಶೇ.೫೦ರಷ್ಟು ಆಸ್ತಿ ತೆರಿಗೆಯಿಂದ ರಿಯಾಯಿತಿಯನ್ನು ಪಡೆಯಲಿಚ್ಛಿಸುವ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ ಕೆಟಿಟಿಎಫ್ ಕಾಯ್ದೆ ೮/೧ರ ಅನ್ವಯ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಬೇಕು.
ಈ ಸಂಬಂಧ ವೆಬ್‌ಸೈಟಿನಲ್ಲಿ ನೋಂದಣಿಯಾದ ಸದಸ್ಯರಿಗೆ ಈ ರಿಯಾಯಿತಿಯನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೆ, ಕೋವಿಡ್ ಮೊದಲ ಮತ್ತು ಎರಡನೇ ಅಲೆಯಿಂದ ಪ್ರವಾಸೋದ್ಯಮ ವಲಯ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಆಸ್ತಿ ತೆರಿಗೆ ಮನ್ನಾ ಮಾಡುವಂತೆ ಕರ್ನಾಟಕ ಪ್ರವಾಸೋದ್ಯಮ ಸೊಸೈಟಿ ಬೇಡಿಕೆ ಸಲ್ಲಿಸಿತ್ತು.
೨೮೮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು, ಅತಿಥಿಗೃಹಗಳು, ವಸತಿ ಗೃಹಗಳು, ರೆಸ್ಟೋರೆಂಟ್‌ಗಳಿಂದ ತೆರಿಗೆ ಮತ್ತು ಶೇ ೨೬ರಷ್ಟು ಉಪಕರ ಸೇರಿ ೪೬.೦೪ ಕೋಟಿ ಸಂಗ್ರಹ ಆಗಬೇಕಿದೆ. ಶೇ ೫೦ರಷ್ಟು ತೆರಿಗೆ ವಿನಾಯಿತಿ ನೀಡಿದರೆ ಸುಮಾರು ೨೩.೦೨ ಕೋಟಿ ಆರ್ಥಿಕ ನಷ್ಟ ಉಂಟಾಗಲಿದೆ. ಈ ಮೊತ್ತವನ್ನು ಸರಿತೂಗಿಸಲು ರಿಯಾಯಿತಿ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಒಟ್ಟಿನಲ್ಲಿ ಕೋವಿಡ್ ಪ್ರವಾಸೋದ್ಯಮ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.ಈ ಮೊದಲು ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಉಳಿದೆಲ್ಲ ಜಿಲ್ಲೆಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಘೋಷಿಸಿ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿತ್ತು.