ಹೋಂ ಐಸೋಲೇಷನ್ ಗೆ ಅವಕಾಶ ಇಲ್ಲ

ಹೊನ್ನಾಳಿ.ಜೂ.೪; ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಯಾವುದೇ ಗ್ರಾಮದಲ್ಲೂ ಹೋಂ ಐಸೋಲೇಷನ್ ಗೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಿ.ಎಂ.ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಹೊನ್ನಾಳಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸೋಂಕಿತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮಾತನಾಡಿದರು.ಸೋಂಕು ಸಮುದಾಯಕ್ಕೂ ಹರಡುತ್ತಿರುವ ಹಿನ್ನಲೆಯಲ್ಲಿ ಕುಟುಂಬಸ್ಥರಿಗೂ ಹರಡುವ ಸಂಭವ ಹೆಚ್ಚಾಗಿರುವುದರಿಂದ ದಯಮಾಡಿ ಗ್ರಾಮೀಣ ಭಾಗದ ಸಾರ್ವಜನಿಕರು ಹೋಂ ಐಸೋಲೇಷನ್‌ಗೆ ಹೋಗದೆ ಆರೈಕೆ ಕೇಂದ್ರಕ್ಕೆ ಬನ್ನಿ ನಾವು ಸಹ ನಿಮ್ಮ ಜೊತೆ ಇರುತ್ತೇವೆ ದೈರ್ಯದಿಂದ ಕರೋನಾವನ್ನು ಎದುರಿಸಬೇಕು ಮನೆಯಲ್ಲೇ ಇದ್ದರೆ ಇತರರಿಗೂ ಹರಡುತ್ತದೆ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಇಡೀ ದೇಶದಲ್ಲೆ ತಾಲೂಕು ಮಟ್ಟದ ದೊಡ್ಡದಾದ ಕೋವಿಡ್ ಕೇರ್ ಸೆಂಟರ್‌ನ್ನು ಪ್ರಾರಂಭಿಸಿದ್ದೇವೆ ಈಗಾಗಲೆ ಸೋಂಕಿತರು ದಾಖಲಾಗುತ್ತಿದ್ದಾರೆ,ಅವರಿಗೆ ಬೇಕಾದ ಎಲ್ಲಾ ವೈದ್ಯಕೀಯ ಸೌಲಭ್ಯ,ಪೌಷ್ಟಿಕಾಂಶದ ಆಹಾರಗಳನ್ನು ನೀಡಲಾಗುತ್ತಿದೆ ಯಾರೂ ಭಯ ಪಡುವ ಅಗತ್ಯ ಇಲ್ಲ ಎಂದರು.ಮೂರನೆ ಅಲೆಗೆ ಸಿದ್ದತೆ ; ಎರಡನೇ ಅಲೆಯಲ್ಲಿ ಸೋಂಕು ಇನ್ನೂ ಸಂಪೂರ್ಣವಾಗಿ ಹೋಗಿಲ್ಲ,ಆದರೂ ತಜ್ಞರ ಪ್ರಕಾರ ಮೂರನೆ ಅಲೆ ಅತೀ ಭಯಂಕರ ಎಂದು ಹೇಳಿರುವುದರಿಂದ ಅದನ್ನು ಸಮರ್ಥವಾಗಿ ಎದುರಿಸುವ ಅಧಿಕಾರಿಗಳ ತಂಡ ನಮ್ಮ ಜೊತೆ ಇದೆ ಈಗಾಗಲೆ ಒಂದು ಸುತ್ತಿನ ಚರ್ಚೆ ಸಹ ಅಧಿಕಾರಿಗಳ ಜೊತೆ ಮಾಡಿದ್ದೇನೆ ಎಂದು ತಿಳಿಸಿದರು.