ಹೊಸ ಶಿಷ್ಯರಿಗೆ ಗುರು ಆಶೀರ್ವಾದ

* ಚಿಕ್ಕನೆಟಕುಂಟೆ ಜಿ.ರಮೇಶ್

ನಾಲ್ಕು ದಶಕಗಳ ಹಿಂದೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ “ಗುರು‌ಶಿಷ್ಯರು” ಚಿತ್ರ ಅದೇ ಹೆಸರಲ್ಲಿ ಮತ್ತೊಮ್ಮೆ ಮೋಡಿ ಮಾಡಲು ಸಜ್ಜಾಗುತ್ತಿದೆ.

ಕಾಮಿಡಿ ನಟನಾಗಿ ಗುರುತಿಸಿಕೊಂಡಿದ್ದ ದ್ವಾರಕೀಶ್ ಅವರು ಚಿತ್ರ ನಿರ್ಮಾಣ ಮಾಡಿದ್ದರು.‌ ಕಾಕತಾಳೀಯ ಎಂಬಂತೆ ಹಾಸ್ಯಕ್ಕೆ ಹೊಸ ಭಾಷ್ಯ ಬರೆದ ನಟ ಶರಣ್ ಅವರು ಈ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಅವರೊಂದಿಗೆ ನಟ ,ನಿರ್ದೇಶಕ ತರುಣ್ ಕಿಶೋರ್ ಸಾಥ್ ನೀಡಿದ್ದಾರೆ.

ಜಂಟಲ್ ಮ್ಯಾನ್ ಖ್ಯಾತಿಯ ನಿರ್ದೇಶಕ‌ ಜಡೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಅಜನೀಶ್ ಲೋಕ್ ನಾಥ್ ಸಂಗೀತ‌ ನೀಡುತ್ತಿದ್ದಾರೆ.

ಮತ್ತೊಂದು ವಿಶೇಷ ಎಂದರೆ ಹಿರಿಯ ನಟ ದ್ವಾರಕೀಶ್ ಅವರು, “ಗುರು ಶಿಷ್ಯರು ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶರಣ್-ತರುಣ್ ತಂಡಕ್ಕೆ ಮನಸಾರೆ ಶುಭ ಹಾರೈಸಿದ್ದಾರೆ. ಹೀಗಾಗಿ ಚಿತ್ರತಂಡಕ್ಕೆ ಆನೆ ಬಲ‌ಬಂದಿದೆ.

“ಗುರು ಶಿಷ್ಯರ” ಬಗ್ಗೆ ಮಾಹಿತಿ ಹಂಚಿಕೊಂಡ ನಟ,ನಿರ್ಮಾಪಕ ಶರಣ್, ಎರಡು ನಿರ್ಮಾಣ ಸಂಸ್ಥೆಗಳು ಜೊತೆ ಸೇರಿ ಸಿನಿಮಾ ಮಾಡಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿ ಮಾಡಿದ್ದ “ಗುರು ಶಿಷ್ಯರು” ಮತ್ತು ನಾವು ನಿರ್ಮಾಣ ಮಾಡುವ “ಗುರು ಶಿಷ್ಯರು” ಚಿತ್ರಕ್ಕೆ ಶೀರ್ಷಿಕೆ ಮತ್ತು ಗುರು ಶಿಷ್ಯರ ಸಂಬಂಧ ಬಿಟ್ಟು ಇನ್ನು ಯಾವುದರಲ್ಲಿಯೂ ಸಂಬಂಧವಿಲ್ಲ. ಅಪ್ಪಟ ಮನರಂಜನಾತ್ಮಕ ಚಿತ್ರ. ಕಾಮಿಡಿಯಾಗಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.

ಹಿರಿಯ ನಟ ದ್ವಾರಕೀಶ್ ಅವರು ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಸಂಕ್ರಾಂತಿ ಬಳಿಕ ಸೂಕ್ತ ಸಮಯ ನೋಡಿಕೊಂಡು ಚಿತ್ರೀಕರಣ ಆರಂಭಿಸಲಾಗುವುದು, ತಿಂಗಳಾಂತ್ಯದ ವೇಳೆ ಇನ್ನುಳಿದ ಕಲಾವಿದರನ್ನು ಅಂತಿಮ ಮಾಡಲಾಗುವುದು.ಒಳ್ಳೆಯ ತಂಡ ಸೇರಿಕೊಂಡಿದೆ. ಒಳ್ಳೆಯ ಚಿತ್ರವನ್ನು ಜನರ ಮುಂದೆ ಇಡುವುದು ನಮ್ಮ ಉದ್ದೇಶ ಎಂದರು.

ಇದೇ ಮೊದಲ ಬಾರಿಗೆ ಜಡೇಶ್ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರೊಂದಿಗೆ ಕೆಲಸ ಮಾಡಲಾಗುತ್ತಿದೆ. ಒಳ್ಳೆಯ ಕೆಲಸಗಾರರು ಹೀಗಾಗಿ ಉತ್ತಮ ಚಿತ್ರ ಮೂಡಿ ಬರಲಿದೆ ಎನ್ನುವ ವಿಶ್ವಾಸ ಹೊರಹಾಕಿದರು.

ಕಾಮಿಡಿ ಚಿತ್ರವಾದರೂ ಬೇರೆಯ ರೀತಿ ಇದ್ದು ಜನರಿಗೆ ಹೊಸತನದ ಚಿತ್ರ ಇದಾಗಲಿದೆ. ಜನರು ನಗಿಸುವ ಜವಬ್ದಾರಿ ನೀಡಿದ್ದಾರೆ ಅದನ್ನು ಪ್ರಾಮಾಣಿಕತೆಯಿಂದ ನಿರ್ವಹಿಸತ್ತೇವೆ ಎಂದರು.

ನಿರ್ದೇಶಕ ಜಡೇಶ್ ಮಾತನಾಡಿ, ನೈಜ ಘಟನೆಯ ಆಧಾರಿತ ಚಿತ್ರ. ಶಿಕ್ಷಕರು ವಿದ್ಯಾರ್ಥಿಗಳ ಸಂಬಂಧ ಚಿತ್ರದಲ್ಲಿದೆ.ಬೆಂಗಳೂರು, ಮೈಸೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆ 75 ದಿನಗಳ ಕಾಲ ಚಿತ್ರೀಕರಣ ಮಾಡುವ ಉದ್ದೇಶವೊಂದಲಾಗಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ಬಾವುಕರಾದ ದ್ವಾರಕೀಶ್

ಗುರು ಶಿಷ್ಯರು ಚಿತ್ರ ಮಾಡುವಾಗ ಎಲ್ಲಾ ಕಾಮಿಡಿ ಕಲಾವಿದರನ್ನು ಸೇರಿಸಬೇಕು ಎನ್ನುವ ಉದ್ದೇಶಿವಿತ್ತು. ಆಗಷ್ಟೇ ನರಸಿಂಹರಾಜು ಅವರು ಕಾಲವಾದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ಅರೆ ಕ್ಷಣ ಬಾವುಕರಾಗಿ ಗದ್ಗರಿತರಾದರು ಹಿರಿಯ ನಟ ದ್ವಾರಕೀಶ್.

ಗುರು ಶಿಷ್ಯರು ಚಿತ್ರದ ಶೀರ್ಷಿಕೆ ಬಿಡುಗಡೆ ವೇಳೆ ಅವರು ಈ ಮಾಹಿತಿ ಹಂಚಿಕೊಂಡ ತಂಡಕ್ಕೆ ಶುಭ ಹಾರೈಸಿದ್ದಾರೆ.