ಹೊಸ ಶಿಕ್ಷಣ ನೀತಿ ಜಾರಿಗೆ ಅಣಿಯಾಗಿ

ಬೀದರ್: ನ.15:ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಶಿಕ್ಷಕರು ಅಣಿಯಾಗಬೇಕು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ನಗರದ ನೌಬಾದ್‍ನ ಡಯಟ್‍ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ 21ನೇ ಶತಮಾನದ ಬೋಧನಾ ಕೌಶಲ ಕುರಿತ 12 ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಸರ್ವಾಂಗೀಣ ವಿಕಾಸ ಗಮನದಲ್ಲಿ ಇಟ್ಟುಕೊಂಡು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಕರು ಅದನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು. ಮಕ್ಕಳನ್ನು 21ನೇ ಶತಮಾನದ ಸ್ಪರ್ಧೆ ಎದುರಿಸಲು ತಯಾರುಗೊಳಿಸಬೇಕು ಎಂದು ಹೇಳಿದರು.
ಕೇವಲ ಪಾಠ ಹೇಳುವ ಶಿಕ್ಷಕರಾಗದೆ, ಮಕ್ಕಳ ಪ್ರತಿ ಹಂತದ ಬೆಳವಣಿಗೆ ಮೇಲೂ ನಿಗಾ ಇಟ್ಟು, ಮಾರ್ಗದರ್ಶನ ಮಾಡಿ, ಅವರ ಭವಿಷ್ಯ ರೂಪಿಸುವ ಗುರುವಾಗಬೇಕು. ಸರಳವಾಗಿ ಅರ್ಥವಾಗುವ ಸುಲಭ ಬೋಧನಾ ವಿಧಾನಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ವಿಶ್ವದಲ್ಲಿ ಭಾರತದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಗಣಿತದಲ್ಲಿ ಬುದ್ಧಿವಂತರು ಇದ್ದಾರೆ. ಹೆಚ್ಚು ಅವಧಿಗೆ ಕೆಲಸ ಮಾಡುವ ಸಾಮರ್ಥ್ಯವೂ ಭಾರತೀಯರಿಗೆ ಇದೆ. ಭಾರತೀಯರು ವಿದೇಶಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಮಗ್ರ ಮಾಹಿತಿ ನೀಡಲು ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳಲ್ಲಿ ಸಂಘದ ವತಿಯಿಂದ ಶಿಕ್ಷಕರಿಗೆ ಮೂರನೇ ಹಂತದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಘ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ಮಾರ್ಗದರ್ಶನ ಮಾಡುತ್ತಿದೆ. ಈ ಭಾಗದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ಆಗಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಉಪ ಪ್ರಾಚಾರ್ಯ ಡಾ. ಮಹಮ್ಮದ್ ಗುಲ್ಶನ್ ಮಾತನಾಡಿದರು.
ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸಂದೀಪ್, ರವೀಂದ್ರ, ಡಯಟ್ ಉಪನ್ಯಾಸಕರಾದ ಶಿವಶಂಕರ ಸ್ವಾಮಿ, ಧನರಾಜ ಗುಡಮೆ ಇದ್ದರು. ಉಪನ್ಯಾಸಕ ಗೋವಿಂದ ರೆಡ್ಡಿ ಸ್ವಾಗತಿಸಿದರು. ಗಣಪತಿ ಹಡಪದ ನಿರೂಪಿಸಿದರು. ಡಯಟ್ ನೋಡಲ್ ಅಧಿಕಾರಿ ಸಂತೋಷ ಪೂಜಾರಿ ವಂದಿಸಿದರು.
150 ಶಾಲೆಗಳ 150 ಶಿಕ್ಷಕರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಟ್ರಸ್ಟ್, ಡಯಟ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.