ಹೊಸ ಶಾಸಕರ ಮುಂದಿವೆ ನೂರೆಂಟು ಸವಾಲ್!

??????

ಅಕ್ರಮ ಚಟುವಟಿಕೆಗಳ ಚಾಲೆಂಜ್ | ಮೂಲಸೌಲಭ್ಯ, ರೈತರ ಹತ್ತಾರು ಸಮಸ್ಯೆಗಳು
ದೇವದುರ್ಗ,ಮೇ.೧೭- ಜಿಲ್ಲೆಯಲ್ಲಿ ಅತಿಹೆಚ್ಚು ೩೪ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ ದೇವದುರ್ಗ ನೂತನ ಶಾಸಕಿ ಕರೆಮ್ಮ ಜಿ.ನಾಯಕಗೆ ಮುಂದಿನ ದಿನಗಳಲ್ಲಿ ನೂರೆಂಟು ಸವಾಲುಗಳು ಎದುರಾಗಿವೆ. ಕೆಲವು ತಾತ್ಕಾಲಿಕವಾಗಿದ್ದರೆ ಇನ್ನು ಕೆಲವು ಕಠಿಣ ಸವಾಲುಗಳಿವೆ.
ಅಕ್ರಮ ಚಟುವಟಿಕೆಗಳಿಂದಲೇ ತಾಲೂಕು ಜಿಲ್ಲೆಯಲ್ಲಿ ಸದ್ದುಮಾಡಿದೆ. ಅಲ್ಲದೆ ಅತಿಹೆಚ್ಚು ತಾಂಡಾ, ದೊಡ್ಡಿಗಳನ್ನು(೭೦ಕ್ಕೂ ಹೆಚ್ಚು) ಒಳಗೊಂಡಿದ್ದು ಅಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕಿದೆ. ದೊಡ್ಡ ಸಮಸ್ಯೆಗಳಿಗೆ ಸರ್ಕಾರದಿಂದಲೇ ಪರಿಹಾರಬೇಕಿದ್ದು, ಜೆಡಿಎಸ್ ಶಾಸಕಿಯಾಗಿರುವ ಕರೆಮ್ಮಗೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಸವಾಲಿದೆ.
ಜಾಲಹಳ್ಳಿ ಹಾಗೂ ಗಬ್ಬೂರು ತಾಲೂಕು ಕೇಂದ್ರ ಮಾಡಬೇಕು ಎನ್ನುವ ಬೇಡಿಕೆಯಿದೆ. ನಾರಾಯಣಪುರ ಬಲದಂಡೆ ನಾಲೆ ಜಾರಿಗೊಳಿಸಿದ್ದರೂ ಗಬ್ಬೂರು, ಅರಕೇರಾ ಹೋಬಳಿ ಕೊನೇಭಾಗದ ರೈತರಿಗೆ ಸಮರ್ಪಕವಾಗಿ ನೀರುಸಿಗುತ್ತಿಲ್ಲ. ಏತ ನೀರಾವರಿ ಜಾರಿಗೊಳಿಸಬೇಕಿದೆ. ಜಿಲ್ಲೆಯಲ್ಲೆ ಅತಿಹೆಚ್ಚು ಉತ್ಕೃಷ್ಟ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಬೆಲೆ ಕುಸಿದಾಗ ಅವುಗಳನ್ನು ಸಂಗ್ರಹಿಸಲು ಕೋಲ್ಡ್‌ಸ್ಟೋರೆಜ್ ಬೇಡಿಕೆಯಿದೆ.
ದೇವದುರ್ಗದಲ್ಲಿ ಚಿಲ್ಲಿ ಸಂಶೋಧನೆ ಕೇಂದ್ರ ಪ್ರಾರಂಭಿಸಲು ರಾಯಚೂರು ಕೃಷಿ ವಿಜ್ಞಾನಗಳ ವಿವಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರ ಬೇಡಿಕೆ ಕೂಡಹೆಚ್ಚಿದೆ. ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪನೆ ಒತ್ತಾಯ ಕೇಳಿಬರುತ್ತಿವೆ. ಈ ಎಲ್ಲ ಬೇಡಿಕೆ ಈಡೇರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಇಲ್ಲಿ ಕಾಂಗ್ರೆಸ್, ಮೇಲೆ ಬಿಜೆಪಿ ಸರ್ಕಾರವಿದ್ದು ಇವರ ಬೇಡಿಕೆಗಳಿಗೆ ಸರ್ಕಾರ ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲವಿದೆ.
ನಾರಾಯಣಪುರ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಿದ್ದು ಎರಡನೇ ಬೆಳೆಗೆ ವಾರಬಂಧಿ ಪದ್ಧತಿ ಜಾರಿಯಲ್ಲಿದೆ. ಇದು ರೈತರಿಗೆ ಕಬ್ಬಿಣದ ಕಡೆಲೆಯಾಗಿದ್ದು ಭತ್ತ, ಮೆಣಸಿನಕಾಯಿ ಬೆಳೆಗೆ ಹೊಡೆತನೀಡುತ್ತಿದೆ. ಕೃಷ್ಣಾನದಿ ತುಂಬಿಹರಿದಾಗ ಹಲವು ಹಳ್ಳಿಗಳಲ್ಲಿ ನೆರೆಹಾವಳಿ ಭೀತಿಯಿದ್ದು, ಗ್ರಾಮಸ್ಥಳಾಂತರ ಬೇಡಿಕೆಗಳು ಹೆಚ್ಚಾಗಿರುವುದು ದೊಡ್ಡ ಸವಾಲ್‌ಆಗಿದೆ.

ಬಾಕ್ಸ್====
ಜೀವಜಲಕ್ಕೆ ಹಾಹಾಕಾರ
ಕೂಗಳತೆ ದೂರದಲ್ಲಿ ಕೃಷ್ಣಾನದಿ, ನಾರಾಯಣಪುರ ಬಲದಂಡೆ ನಾಲೆಯಿದ್ದರೂ ಹಲವು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆಯಿದೆ. ೧೧೦ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು ೬೫ಸುಸ್ಥಿತಿಯಲ್ಲಿದ್ದರೆ ೨೭ಬಂದ್‌ಆಗಿವೆ. ೧೮ಘಟಕ ೧೦-೧೨ವರ್ಷ ಆಯಸ್ಸು ಆಗಿದ್ದು ಕ್ರಾಪ್‌ಆಗಿವೆ. ಹೊಸ ಘಟಕ ಸ್ಥಾಪನಗೆ ಮುಂದಾಗಿದೆ. ೭ಕಡೆ ಶಾಶ್ವತ ಕುಡಿವ ನೀರು ಕಲ್ಪಿಸಲು ಜಾರಿಗೊಳಿಸಿದ ಬಹುಗ್ರಾಮ ಕುಡಿವ ನೀರಿನ ಯೋಜನೆ ಸಂಪೂರ್ಣ ಹಳ್ಳಹಿಡಿದಿದ್ದು, ೭ ಗ್ರಾಪಂಗಳು ಜೀವಜಲಕ್ಕಾಗಿ ಪರಿತಪಿಸುತ್ತಿವೆ. ತಾಂಡಾ, ದೊಡ್ಡಿಗಳಲ್ಲಿ ಕುಡಿವ ನೀರು, ವಿದ್ಯುತ್, ರಸ್ತೆ ಸೇರಿ ಮೂಲಭ್ಯಗಳ ಕೊರತೆಯಿದ್ದು ಪರಿಹಾರ ಕಲ್ಪಿಸಬೇಕಿದೆ.

ಬಾಕ್ಸ್====
ಅಕ್ರಮ ಚಟುವಟಿಕೆಗಳು
ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿವೆ. ಸಿಟಿಯಿಂದ ಗ್ರಾಮೀಣ ಭಾಗದವರೆಗೂ ಮಟ್ಕಾ, ಕೋಳಿಪಂದ್ಯಾ, ಇಸ್ಪೀಟ್ ಜೂಜಾಟ ಜೋರಾಗಿದೆ. ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ, ತಾಂಡಾ, ದೊಡ್ಡಿಗಳಲ್ಲಿ ಸಾರಾಯಿ ಮಾರಾಟ ನಡೆಯುತ್ತಿದೆ. ಕೃಷ್ಣಾ ನದಿದಂಡೆಯ ಸುಮಾರು ೫೭ಕಿಮೀ ವ್ಯಾಪ್ತಿಯಲ್ಲಿ ಮರಳು ಅಕ್ರಮದಂಧೆ ಮಿರಿಮೀರಿದೆ. ರಾಯಲ್ಟಿ ಇಲ್ಲದೆ ಸಾಗಣೆ, ಓವರ್‌ಲೋಡ್, ಹಗಲುರಾತ್ರಿ ಜೆಸಿಬಿ, ಟಿಪ್ಪರ್‌ಗಳ ಘರ್ಜನೆ ಜನರ ನೆಮ್ಮದಿಕಸಿದಿವೆ. ಈ ದಂಧೆಗೆ ಬೆಂಗಳೂರುವರೆಗೆ ಲಿಂಕ್‌ಯಿದ್ದು, ಇದನ್ನು ತಡೆಯುವುದು ದೊಡ್ಡ ಸವಾಲ್‌ಲೇ ಸರಿ ಎನ್ನುವ ಸ್ಥಿತಿಯಿದೆ.

ಕೋಟ್======
ಅಕ್ರಮ ಚಟುವಟಿಕೆಗಳ ಬಗ್ಗೆ ಮೃದುಧೋರಣೆ, ರಾಜಿಯಿಲ್ಲ. ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಾಗುವುದು. ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ. ಗ್ರಾಮೀಣ ಭಾಗದ ಜನರಿಗೆ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ನೀರಾವರಿ ಸಮಸ್ಯೆಗೆ ಸರ್ಕಾರದ ಮೇಲೆ ಒತ್ತಡಹಾಕಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.

| ಕರೆಮ್ಮ ಜಿ.ನಾಯಕ
ಶಾಸಕಿ

ಕೋಟ್======
ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿದ್ದು ಇಸ್ಪೀಟ್, ಮಟ್ಕಾ, ಸಾರಾಯಿ ಮಾರಾಟ ಜೋರಾಗಿದೆ. ಹಗಲುರಾತ್ರಿ ಎನ್ನದೆ ಮರಳು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಇವುಗಳಿಗೆ ಕಡಿವಾಣ ಹಾಕಿ ನದಿದಂಡೆ ಜನರಿಗೆ ನೆಮ್ಮದಿ ಕೊಡಬೇಕು. ಸಮರ್ಪಕ ನೀರು ಒದಗಿಸಿದರೆ ಅನುಕೂಲವಾಗಲಿದೆ.

| ಉಮಾಪತಿಗೌಡ
ನಗರಗುಂಡದ ರೈತ.