ಹೊಸ ಶಾಲಾ ಕಟ್ಟಡ ನಿರ್ಮಾಣ-ಯಾದವಾಡ

ರಾಮದುರ್ಗ, ನ 19 ರೂ.19 ಕೋಟಿ ಅನುದಾನ ತಾಲೂಕಿನ 65 ಗ್ರಾಮಗಳ 161 ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಬುಧವಾರ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ರೂ. 102 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲಾ ಕಟ್ಟಡ, ರೂ. 12 ಲಕ್ಷ ವೆಚ್ಚದಲ್ಲಿ ಸಿದ್ಧಾರೂಡ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ, ರೂ. 22 ಲಕ್ಷ ವೆಚ್ಚದಲ್ಲಿ ಸಂಗಮೇಶ್ವರ ನಗರದ ಕಿರಿಯ ಪ್ರಾಥಮಿಕ ಶಾಲೆಯ 2 ಕೊಠಡಿ, ರೂ. 18.60 ಲಕ್ಷ ವೆಚ್ಚದಲ್ಲಿ ಕಲ್ಲೂರ ಸರ್ಕಾರಿ ಪ್ರಾಥಮಿಕ ಶಾಲೆಯ 2 ಕೊಠಡಿ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಹಲವಾರು ಯೋಜನೆಗಳ ಮೂಲಕ ಶಿಕ್ಷಣದ ಸಬಲೀಕರಣ ಮಾಡಲು ಶ್ರಮಿಸುತ್ತಿದ್ದು ಅವುಗಳ ಪ್ರಯೋಜನ ಪಡೆದು ಎಲ್ಲರೂ ಶಿಕ್ಷಣವಂತರಾಗಬೇಕು ಎಂದು ಹೇಳಿದರು.
ಪ್ರತಿಯೊಬ್ಬರಿಗೂ ನಮ್ಮ ಊರು ನಮ್ಮ ಶಾಲೆ ನಮ್ಮೂರಿನ ಮಕ್ಕಳು ಎನ್ನವ ಅಭಿಮಾನ ಇದ್ದರೆ ಮಾತ್ರ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮಂಡಳ ಪಂಚಾಯತ ಮಾಜಿ ಪ್ರಧಾನ ಬಿ. ಎಫ್. ಬಸಿಡೋಣಿ, ಪಿ. ಎಲ್. ಹೂಗಾರ, ಮಹಾದೇವ ಕುಲಗೋಡ, ಎನ್. ಜಿ. ಪಾಟೀಲ, ಹನಮಂತಗೌಡ ಪಾಟೀಲ, ದುಂಡಯ್ಯ ಹಿರೇಮಠ, ಹನಮಂತ ತೊಟಗಿ, ಪಿಡಿಓ ಶೇಖರ ಹಿರೇಸೋಮನ್ನವರ, ಶಿಕ್ಷಣ ಇಲಾಖೆಯ ಪ್ರಭಾಕರ, ಸಿಆರ್‍ಪಿ ಹಡಪದ ಸೇರಿದಂತೆ ಗ್ರಾಮಸ್ಥರು ಇದ್ದರು.