ಹೊಸ ವಿವಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ

ಕೋಲಾರ,ಡಿ,೮- ಜಿಲ್ಲೆಯಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಹೊಸ ವಿವಿಗಳಿಗೆ ಅಗತ್ಯ ಮೂಭೂತ ಸೌಲಭ್ಯಗಳು ಮತ್ತು ಅನುದಾನ ಬಿಡುಗಡೆ ಮಾಡುವಂತೆ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಮಂಡಲ ಅಧಿವೇಶದನದಲ್ಲಿ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸರ್ಕಾರದ ಗಮನ ಸೆಳೆದರು.
ಉನ್ನತ ಶಿಕ್ಷಣ ಸಚಿವರು ಗಮನಸೆಳೆಯುವ ಸೂಚನೆಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ಅಸಮತೋಲನ ನೀಗಿಸುವ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ಉನ್ನತ ಶಿಕ್ಷಣದ ವಾರ್ಷಿಕ ನೋಂದಣಿ ಅನುಪಾತವನ್ನು ಸುಧಾರಿಸುವ ನಿಟ್ಟಿನಲ್ಲಿ ಅಲ್ಲಿನ ಸಮುದಾಯಕ್ಕೆ ಅವಕಾಶವನ್ನು ಸ್ಥಳೀಯವಾಗಿ ಕಲ್ಪಿಸಿ, ಯುವಜನಾಂಗವನ್ನು ದೇಶದ ಫಲಪ್ರದವಾಗಿ ಬೆಳೆಸಲು ಸಹಯೋಗ ನೀಡುವ ನಿಟ್ಟಿನಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.
ಆದರೆ ಹೀಗೆ ಸ್ಥಾಪನೆಯಾಗಿರುವ ಹಲವು ವಿಶ್ವವಿದ್ಯಾಲಯಗಳು ಸಂಯೋಜಿತ ಕಾಲೇಜುಗಳ ಸಂಖ್ಯೆಯು ಹಳೆಯ ವಿಶ್ವವಿದ್ಯಾಲಯಗಳ ರೀತಿಯಲ್ಲಿ ಇಲ್ಲದೇ ಇರುವುದು, ಸ್ವಂತ ಕಟ್ಟಡ ಇಲ್ಲದೇ ಇರುವುದು ಹಾಗೂ ಖಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿ, ಆರ್ಥಿಕ ಮುಗ್ಗಟ್ಟು ಸರ್ಕಾರದಿಂದ ಅನುದಾನ ಇಲ್ಲದೇ ಇರುವುದು ಮುಂತಾದ ಹಲವಾರು ಸಮಸ್ಯೆಗಳಿಂದ ಸೊರಗಿ ನಿಂತಿದ್ದು, ಇನ್ನೂ ಟೇಕಪ್ ಆಗಿಲ್ಲ ಎಂದು ಸಚಿವರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಚಿವರು ಉತ್ತರ ನೀಡಿ, ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ೭ ವಿಶ್ವವಿದ್ಯಾಲಯಗಳನ್ನು ಚಾಮರಾಜನಗರ, ಹಾಸನ,ಬೀದರ್,ಕೊಪ್ಪಳ,ಹಾವೇರಿ, ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪಿಸಲಾಗುವುದು. ಈ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸಿದೇ ಕಾರ್ಯನಿರ್ವಹಿಸಲಿದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಈ ವಿಶ್ವವಿದ್ಯಾಲಯಗಳಿಗೆ ವಾರ್ಷಿಕ ತಲಾ ರೂ.೨ ಕೋಟಿಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿದೆ ಎಂದರು.
ನೂತನವಾಗಿ ಸ್ಥಾಪಿತವಾಗಿರುವ ವಿಶ್ವವಿದ್ಯಾಲಯಗಳು ಸುಗಮವಾಗಿ ಕಾರ್ಯನಿರ್ವಹಿಸಲು ಮಾತೃ ವಿಶ್ವವಿದ್ಯಾಲಯಗಳಿಂದ ವಿಭಜಿಸಲ್ಪಟ್ಟ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯಭಾರದ ಆಧಾರದ ಮೇಲೆ ಸ್ಥಳಾಂತರಿಸಬೇಕಾದ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಸಂಯೋಜಿತ ಕಾಲೇಜುಗಳು, ಸ್ನಾತಕೋತ್ತರ ಕೇಂದ್ರಗಳು ಮತ್ತು ಚರಾಸ್ಥಿ ಮತ್ತು ಸ್ತಿರಾಸ್ಥಿಗಳ ಹಂಚಿಕೆ ಬಗ್ಗೆ ಸಲ್ಲಿಸಿರುವ ವರದಿಯನ್ನು ಸರ್ಕಾರವು ಒಪ್ಪಿ ಹೊಸ ವಿಶ್ವವಿದ್ಯಾಲಯಗಳಿಗೆ ಕೆಲವು ಷರತ್ತು ಮತ್ತು ನಿಬಂಧನೆಗೊಳಪಟ್ಟು ಸ್ಥಳಾಂತರಿಸಿ ಹಂಚಿಕೆ ಮಾಡಿ ಆದೇಶಿಸಿದೆ ಎಂದರು.
ವಾರ್ಷಿಕ ರೂ.೨.೦೦ ಕೋಟಿಗಳ ಆವರ್ತಕ ವೆಚ್ಚ ಹಾಗೂ ವೇತನ ಪಾವತಿಗಾಗಿ ತಲಾ ರೂ.೧೦೦.೦೦ ಲಕ್ಷಗಳಂತೆ ಪುನರ್ವಿನಿಯೋಗದ ಮೂಲಕ ಬಿಡುಗಡೆಗೊಳಿಸಿ ಆದೇಶಿಸಿಲಾಗಿದ್ದು, ಈ ರೀತಿ ವಿನೂತನವಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಮತ್ತು ಸಾಧಕ ಬಾಧಕಗಳನ್ನು ಗಮನದಲ್ಲಿಸಿಕೊಂಡು ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ:ಸುಧಾಕರ್ ಸದನಕ್ಕೆ ಉತ್ತರ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದರಾಜು ರವರು, ಸರ್ಕಾರ ವಿಶ್ವವಿದ್ಯಾಲಯಕ್ಕೆ ನೀಡಲಾಗುತ್ತಿರುವ ಅನುದಾನ ಯಾವುದಕ್ಕೂ ಸಾಲದ್ದು, ಕೇವಲ ವೇತನಕ್ಕೆ ಮಾತ್ರ ಸೀಮಿತವಾಗಿದೆ, ಪ್ರಸ್ತುತ ಕೋಲಾರದಲ್ಲಿರುವ ಬಾಲಕಿಯರ ಮತ್ತು ಬಾಲಕರ ಪ್ರಥಮ ದರ್ಜೆ ಕಾಲೇಜು ಸುಮಾರು ೭೫ ವರ್ಷಕ್ಕೂ ಮೇಲ್ಪಟಿದ್ದು, ಇಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳ ಕೊರತೆ ಇದ್ದು, ಇದಕ್ಕೆ ಅನುದಾನವನ್ನು ಒದಗಿಸುವಂತೆ, ಸದನದಲ್ಲಿ ಹಲವಾರು ಬಾರಿ ಧ್ವನಿ ಎತ್ತಲಾಗಿತ್ತು, ಆದರೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸರ್ಕಾರ ಎಲ್ಲಾ ವಿಶ್ವವಿದ್ಯಾಲಯಕ್ಕೆ ಬೇಡಿಕೆಗೆ ಅನುಗುಣವಾಗಿ ಅನುದಾನ ನೀಡಿ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಗೋವಿಂದರಾಜು ಒತ್ತಾಯಿಸಿದರು.