ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ

ಮೈಸೂರು:ಜ:01: ಅತ್ಯಂತ ಕಷ್ಟ ಕಾರ್ಪಣ್ಯ ನೋವು ದುಃಖ ಗಳಿಂದ ಕೂಡಿದ್ದ 2020ಕ್ಕೆ ವಿದಾಯ ಹೇಳಿ 2021ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸುಸಂದರ್ಭದಲ್ಲಿ ಹೊಸ ವರ್ಷಾಚರಣೆಯ ಪ್ರಯುಕ್ತ ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವ 4ರಿಂದ ಶ್ರೀದೇವರಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು ಬರುವ ಭಕ್ತಾದಿಗಳಿಗೆ ಲಡ್ಡು ಮತ್ತು ಪುಳಿಯೋಗರೆಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದೆ. ಬೆಳಿಗ್ಗಿನಿಂದಲೇ ಇಲ್ಲಿ ಭಕ್ತರು ಕೋವಿಡ್ 19 ಮಾರ್ಗಸೂಚಿ ಅನುಸರಿಸಿ ಆಗಮಿಸುತ್ತಿದ್ದು ಪ್ರಸಾದ ಸ್ವೀಕರಿಸಿದರು.
ಮೈಸೂರು ವಿಜಯನಗರದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷ 2021ರ ಆಗಮನದ ಪ್ರಯುಕ್ತ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಡೆಯಲಿರುವ ಲಡ್ಡು ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ಯೋಗಾನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕರಾದ ಪೆÇ್ರ. ಭಾಷ್ಯಂ ಸ್ವಾಮೀಜಿ ಚಾಲನೆ ನೀಡಿದರು.
ಈ ವರ್ಷವೂ ಸಹ ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೂರಾರು ಭಕ್ತರು ಬೆಳಿಗ್ಗೆಯಿಂದಲೇ ಆಗಮಿಸಿ ದೇವರ ದರ್ಶನ ಪಡೆದು ಲಡ್ಡು ಮತ್ತು ಪುಳಿಯೋಗರೆ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇಗುಲದ ಸಂಸ್ಥಾಪಕರಾದ ಪೆÇ್ರ. ಭಾಷ್ಯಂ ಸ್ವಾಮೀಜಿ ಮಾತನಾಡಿ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದರು. ಮೈಸೂರು ಸಾಂಸ್ಕೃತಿಕ ನಗರಿಯಲ್ಲಿ ಚಾಮುಂಡಿ ದೇಗುಲ, ಯೋಗ ನರಸಿಂಹ ಸ್ವಾಮಿಯ ಸಾನಿಧ್ಯ ಎರಡೂ ಕೂಡ ವಿಶ್ವವಿಖ್ಯಾತಿಯಾಗಿರತಕ್ಕಂಥದ್ದು, ಆದರೆ ಕೋವಿಡ್ 19ನಲ್ಲಿ ಆರೇಳು ತಿಂಗಳುಗಳ ಕಾಲದಿಂದ ಧಾರ್ಮಿಕ ವಿಧಿ ವಿಧಾನ ಬಿಟ್ಟು ಭಕ್ತಾದಿಗಳಿಗೆ ದೇವರ ದರ್ಶನ ಕೂಡ ಆಗದೇ ಇರುವಂತ ಸಂದರ್ಭ ಒದಗಿ ಬಂತು. ಅದನ್ನು ಸರ್ಕಾರದ ನೀತಿ ನಿಯಮಗಳನ್ನು ಪರಿಪಾಲನೆ ಮಾಡಬೇಕಾಗುವಂಥದ್ದು ನಮ್ಮ ಆದ್ಯ ಕರ್ತವ್ಯ. ಆದರೆ ಈ ದೇಗುಲದಲ್ಲಿ ವೈಶಾಲ್ಯತೆ ಇರುವುದರಿಂದ ಜಾಗದ ವೈಶಿಷ್ಠ್ಯ ಇರುವುದರಿಂದ ಧಾರ್ಮಿಕ ಪರಂಪರೆ ಮಾತ್ರ ಅನುಸರಿಸಿ ಭಕ್ತಾದಿಗಳ ಸಹಕಾರದಿಂದ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೇವಲ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೋವಿಡ್ 19 ಒಂದು ಮಹಾಮಾರಿ ಆದಷ್ಟು ಬೇಗ ತೊಲಗಲಿ ಎಂಬ ದೃಷ್ಟಿಯಿಂದ ಪ್ರಾತಃಕಾಲ 4ಗಂಟೆಯಿಂದ ರಾತ್ರಿ 12ಗಂಟೆಯವರೆಗೆ ಪ್ರಸಾದ ವಿತರಣೆ ಲಡ್ಡು ವಿತರಣೆ ನಿಲ್ಲಿಸಬಾರದೆಂಬ ದೃಷ್ಟಿಯಿಂದ ಸಾಂಗವಾಗಿ ನೆರವೇರಿಸುತ್ತಿದ್ದೇವೆ ಎಂದರು.
ಭಕ್ತಾದಿಗಳು ಕೂಡ ಸಹಕಾರವನ್ನು ನೀಡುತ್ತಿದ್ದಾರೆ. ವಿಶ್ವಶಾಂತಿಯನ್ನು ದ್ಯೋತಕ ಮಾಡಿ 2021ರ ವರ್ಷ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಶುಭಹಾರೈಸಿದರು. ಈ ಬಾರಿ ಸಂಪ್ರದಾಯ ಬಿಡಬಾರದೆಂಬ ಕಾರಣಕ್ಕೆ ಕೇವಲ ಪ್ರಸಾದ ವಿತರಣೆ ಮಾಡಿದ್ದೇವೆ. 34ವರ್ಷದಿಂದ ಆಚರಣೆ ನಡೆಯುತ್ತಿತ್ತು. ಈ ವರ್ಷ ಮನಸ್ಸಿನ ನೋವಿದ್ದರೂ ಕೂಡ ಬಿಡಕೂಡದೆಂಬ ಕಾರಣಕ್ಕೆ ಆಚರಣೆ ಮಾಡುತ್ತಿದ್ದೇವೆ ಎಂದರು.
ನೂರಾರು ಭಕ್ತರು ಕೋವಿಡ್ ಮಾರ್ಗಸೂಚಿ ಅನುಸರಿಸಿ ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು.