ಹೊಸ ವರ್ಷದ ಆರಂಭದಲ್ಲೇ 3ನೇ ಅಲೆ:ತಜ್ಞರ ಎಚ್ಚರಿಕೆ

ನವದೆಹಲಿ,ಡಿ.೬- ಮುಂದಿನ ವರ್ಷ ಆರಂಭದಲ್ಲೇ ಕೋವಿಡ್ ೩ನೇ ಅಲೆ ಹರಡಲಿದೆ ಎಂದು ತಜ್ಞರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈಗಾಗಲೇ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಸಾಕಷ್ಟು ಭೀತಿ ಸೃಷ್ಟಿಸಿರುವ ಬೆನ್ನಲ್ಲೆ ದೇಶಕ್ಕೆ ೩ನೇ ಅಲೆಯ ಬಿಸಿ ತಟ್ಟಲಿದೆ ಎಂದು ಐಐಟಿ ಕಾನ್ಪುರದ ಪ್ರೊ. ಮಣೀಂದ್ರ ಅಗರ್‌ವಾಲ್ ಸುಳಿವು ನೀಡಿದ್ದಾರೆ.
ಹೊಸ ವರ್ಷದ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಈ ೩ನೇ ಅಲೆ ಕಾಣಿಸಿಕೊಳ್ಳಲಿದೆ. ಪ್ರತಿದಿನ ೧ ರಿಂದ ೧.೫ ಲಕ್ಷ ಜನರಿಗೆ ಸೋಂಕು ತಗುಲಲಿದೆ.
೨ನೇ ಅಲೆ ಕಾಣಿಸಿಕೊಂಡ ವೇಳೆ ದೇಶದಲ್ಲಿ ಒಂದೇ ದಿನ ೪ ಲಕ್ಷ ಪ್ರಕರಣಗಳು ದಾಖಲಾಗಿದ್ದವು. ೨ನೇ ಅಲೆಯ ವೇಳೆ ಶೇ. ೮೦ ರಷ್ಟು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಸಹಜವಾಗಿಯೇ ರೋಗನಿರೋಧಕ ಶಕ್ತಿ ಕಡಿಮೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ೩ನೇ ಅಲೆ ಕಾಣಿಸಿಕೊಳ್ಳಲಿದೆ. ಇದಕ್ಕೆ ಲಸಿಕೆ ಪಡೆಯುವುದೊಂದೇ ಪರಿಹಾರವೆಂದು ಅಗರ್‌ವಾಲ್ ತಿಳಿಸಿದರು.
ಅಧ್ಯಯನಗಳ ಪ್ರಕಾರ ದಕ್ಷಿಣ ಆಫ್ರಿಕಾದಲ್ಲಿ ಶೇ. ೧೧ ರಷ್ಟು ಮಂದಿಗೆ ಮತ್ತೆ ಸೋಂಕು ತಗುಲಿದೆ. ಇದು ೧೪ ತಿಂಗಳ ಅವಧಿಯಲ್ಲಿ ಕಾಣಿಸಿಕೊಂಡಿದೆ.
ಆಫ್ರಿಕನ್ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಮಿಕ್ರಾನ್ ಕೊರೊನಾ ಸೋಂಕಿಗಿಂತ ಹೆಚ್ಚಾಗುವ ನಿರ್ಧಾರಕ್ಕೆ ಈಗಲೇ ಬರಲಾಗುವುದಿಲ್ಲ ಎಂದು ವಿಶ್ಲೇಷಿಸಿದರು.
ಸೋಂಕು ತಡೆಗೆ ಸಣ್ಣ ಪ್ರಮಾಣದ ಲಾಕ್‌ಡೌನ್, ರಾತ್ರಿ ಕರ್ಫ್ಯೂ ಜನಸಂದಣಿ ಇರುವ ಜಾಗಗಳಲ್ಲಿ ನಿರ್ಬಂಧಗಳನ್ನು ವಿಧಿಸಿದರೆ ೩ನೇ ಅಲೆಯಲ್ಲಿ ಸಂಭವಿಸಬಹುದಾದ ಹೆಚ್ಚಿನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂದು ಹೇಳಿದರು.
ಐಸಿಎಂಆರ್‌ನ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಮುಳಿಯಿನ್ ಪ್ರತಿಕ್ರಿಯೆ ನೀಡಿ ಒಮಿಕ್ರಾನ್ ಹೊಸ ರೂಪಾಂತರಿ ತಳಿ ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.