ಹೊಸ ವರ್ಷದ ಆಚರಣೆ : ಅಕ್ರಮ, ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಒತ್ತಾಯ


ಸಂಜೆವಾಣಿ ವಾರ್ತೆ
ಗಂಗಾವತಿ, ‌ಡಿ.28: ತಾಲೂಕಿನ ಸಣಾಪುರ, ಆನೆಗುಂದಿ, ಸಂಗಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ರೇವ್ ಪಾರ್ಟಿಗಳಿಗೆ ನಿರ್ಬಂಧಿಸಿ, ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಹೆಚ್. ಶಿವರಾಮೇಗೌಡ್ರು ಬಣ)ವತಿಯಿಂದ ತಹಶೀಲ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರವೇ ತಾಲೂಕಾಧ್ಯಕ್ಷ ಯಮನೂರ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಯ ಸಿದ್ಧತೆಗಳು ನಡೆದಿದ್ದು, ರೇವ್ ಪಾರ್ಟಿಗಳ ಆಯೋಜನೆಗೆ ಕೆಲವು ರೆಸಾರ್ಟ್ ಮಾಲಿಕರು ಹಾಗೂ ರೆಸ್ಟೋರೆಂಟ್‍ಗಳ ಮಾಲಿಕರು ಮುಂದಾಗಿದ್ದು, ಇಂತಹ ಪಾರ್ಟಿಗಳಿಗೆ ನೆರೆಹೊರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಪ್ರಸ್ತುತ ದೇಶಾಧ್ಯಂತ ಕೊರೋನಾ ಭೀತಿ ಮತ್ತೆ ಆರಂಭವಾಗಿದ್ದು, ಹೆಚ್ಚಿನ ಪ್ರವಾಸಿಗರಿಂದಾಗಿ ಕೊರೋನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಾರಣ ತಾಲೂಕಾಡಳಿತ ಮುಂಜಾಗ್ರತಾ ದೃಷ್ಟಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ನಿರ್ಬಂಧ ಹೊರಡಿಸಿ, ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಹನುಮೇಶ್ ಕುರುಬರು, ಉಪಾಧ್ಯಕ್ಷ ಅಂಬಾಸ್, ತಾಲೂಕು ಯುವ ಘಟಕ ಅಧ್ಯಕ್ಷ ಸುನಿಲ್ ಕುಮಾರ್ ಕುಲಕರ್ಣಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪವನ್‍ಕುಮಾರ್ ಗಡ್ಡಿ, ತಾಲೂಕು ಸಂಚಾಲಕ ಸುರೇಶ್ ಚನ್ನಳ್ಳಿ, ತಾಲೂಕು ಕಾರ್ಯದರ್ಶಿ ಹುಲುಗಪ್ಪ ಹಾರೆಗಾರ, ಮುತ್ತುರಾಜ್ ಕುಷ್ಟಗಿ, ವಿಜಯಕುಮಾರ ಸಮಗಾರ, ಮಾರುತಿ ಹಾಗೂ ರಕ್ಷಣಾ ವೇದಿಕೆಯ ಇನ್ನಿತರ ಪದಾಧಿಕಾರಿಗಳು ಭಾಗಿಯಾಗಿದ್ದರು.